Date : 2018-05-24

"ಬೆಂಗಳೂರು : ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ,ಪರಮೇಶ್ವರ್ ಸೂಚಿಸಿ ಅನುಮೋದನೆ ಮಾಡಿದ್ದೇವೆ. ಇವರು ಒಮ್ಮತದ ಅಭ್ಯರ್ಥಿ ಆಗಿರೋದ್ರಿಂದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಸುರೇಶಕುಮಾರ ಅವರು ನಾಮಪತ್ರ ವಾಪಸ್ ತಗೋತಾರೆ ಅನ್ಕೊಂಡಿದೀನಿ ಎಂದರು. ೧೯೯ರಿಂದ೧೯೯೯ ರ ವರೆಗೆ ಸಭಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಉತ್ತಮ ಸ್ಪೀಕರ್ ಅಂತ ಹೆಸರು ಪಡೆದುಕೊಂಡಿದ್ದಾರೆ. ಅಲ್ಲದೆ, ಅವರಿಗೆ ಕಾನೂನು ಜ್ಞಾನ ಇದೆ ಎಂದರು. ರಮೇಶ್ ಕುಮಾರ್ ಗೆ ಸಚಿವ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಸ್ಪೀಕರ್ ಸ್ಥಾನ ಮೊದಲು ಬರೋದು ಆಮೇಲೆ ಸಚಿವ ಸ್ಥಾನ. ಹೀಗಾಗಿ ಹಿರಿಯರು ಅನುಭವಿಗಳು ಆಗಿರೋದ್ರಿಂದ ಅವರನ್ನ ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಲಾಗಿದೆ ಎಂದರು. ಕಾಂಗ್ರೆಸ್-ಜೆಡಿಎಸ್ ಸಮ್ಮೀಶ್ರ ಸರಕಾರ ಐದು ವರ್ಷ ಚೆನ್ನಾಗಿ ನಡೆಯುತ್ತದೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು. "