ಧಾರವಾಡದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಕರ್ನಾಟಕ ವಿಕಾಸ ಯಾತ್ರೆಗೆ ಚಾಲನೆ 14ರಂದು : ಶಾಸಕ ಎನ್.ಹೆಚ್. ಕೋನರಡ್ಡಿ
Date : 2017-11-13 SHARE
ಧಾರವಾಡ : ಇಲ್ಲಿಯ ನರೇಂದ್ರ ಬೈ ಪಾಸ್‍ನಲ್ಲಿ ನವೆಂಬರ್ 14ರಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಆರಂಭಿಸಿರುವ ಕರ್ನಾಟಕ ವಿಕಾಸ ಯಾತ್ರೆ ಧಾರವಾಡದಿಂದ ಬೆಳಗಾವಿಯವರೆಗೆ ನಡೆಯಲಿದ್ದು, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಎಸ್. ಹೊರಟ್ಟಿ ಅವರು ಯಾತ್ರೆಗೆ ಚಾಲನೆ ನೀಡುವರು ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎನ್.ಹೆಚ್. ಕೋನರಡ್ಡಿ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕರ್ನಾಟಕ ವಿಕಾಸ ಯಾತ್ರೆಯೂ ಈಗಾಗಲೇ ಮೈಸೂರಿನ ಚಾಮುಂಡೇಶ್ವರಿಯಿಂದ ಚಿಕ್ಕಮಗಳೂರು, ಶಿವಮೊಗ್ಗದಿಂದ ದಾವಣಗೆರೆಯ ಹರಿಹರದವರೆಗೆ ಭಾರೀ ಯಶಸ್ಸು ಕಂಡಿದ್ದು, ಎಲ್ಲಡೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಇದೀಗ ಮುಂದುವರೆದ ಭಾಗದಲ್ಲಿ ಧಾರವಾಡದಿಂದ ಬೆಳಗಾವಿಯವರೆಗೆ ಕರ್ನಾಟಕ ವಿಕಾಸ ಯಾತ್ರೆ ನಡೆಯಲಿದ್ದು, ಈ ಭಾಗದ ಜೆಡಿಎಸ್ ಕಾರ್ಯಕರ್ತರು ವಾಹನಗಳ ಮೂಲಕ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆಡಿಎಸ್‍ನ ಹಿರಿಯ ಮುಖಂಡರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಬೆಳಗಾವಿಯ ಕಾಕತಿ ಕ್ರಾಸ್‍ನಿಂದ ಎ.ಎಸ್. ಪಾಟೀಲ ನಡಹಳ್ಳಿಯವರ ಸ್ವಾಭಿಮಾನಿ ಕನ್ನಡಿಗರ ಯಾತ್ರೆಯ ಸಮಾರೋಪ ಹಾಗೂ ಬೆಳಗಾವಿ ವಿಭಾಗ ಮಟ್ಟದ ರೈತ ಸಮಾವೇಶದ ಸಿಪಿಎಡ್ ಮೈದಾನದವರೆಗೆ ನಡೆಯಲಿದೆ. ಅಲ್ಲಿ ಯಾತ್ರೆಯೂ ಬೃಹತ್ ಸಮಾವೇಶವಾಗಿ ಮಾರ್ಪಾಡುಗೊಳ್ಳಲಿದೆ ಎಂದರು. ಕರ್ನಾಟಕ ವಿಕಾಸ ಯಾತ್ರೆಯಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ಜ್ವಲಂತ ಸಮಸ್ಯೆಯಾದ ಮಹದಾಯಿ, ಕಳಸಾ-ಬಂಡೂರಿ, ರೈತರ ಸಂಪೂರ್ಣ ಸಾಲಮನ್ನಾ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಪರಿಹಾರ ಬಿಡುಗಡೆ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಮುಂಬರುವ 2018ರ ವಿಧಾನ ಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮನೆಗೆ ಕಳುಹಿಸಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಅನ್ನು ಅಧಿಕಾರಕ್ಕೆ ತರಬೇಕು ಎಂದು ಜನತೆಯಲ್ಲಿ ಮನವಿ ಮಾಡಲಾಗುವುದು ಎಂದರು. ಈ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರ್ನಾಟಕ ವಿಕಾಸ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.