ರಾಜ್ಯ ಸರ್ಕಾರದ ಹತ್ತು ಹಲವು ಸಾಧನೆಗಳೇ ನಮಗೆ ಶ್ರೀರಕ್ಷೆ : ದೀಪಕ ಚಿಂಚೋರೆ
Date : 2017-11-13 SHARE
ಧಾರವಾಡ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತಾಗಿದೆ. ಹೀಗಾಗಿ ನಮಗೆ ನಮ್ಮ ಜನಪ್ರಿಯ ಯೋಜನೆಗಳೇ ಶ್ರೀರಕ್ಷೆಯಾಗಿವೆ ಎಂದು ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು. ಅವರು ಸೋಮವಾರ ಬೆಳಗ್ಗೆ ವಾರ್ಡ ನಂ 22 ರಲ್ಲಿ ಬರುವ ರಾಜೀವಗಾಂಧಿ ನಗರದಲ್ಲಿ ಬೂತ್ ನಂಬರ್ 170 ಹಾಗೂ 171ರಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು. ಬಿಜೆಪಿ ಮುಖಂಡರು ಕೇವಲ ಚುನಾವಣೆ ಸಮೀಪಿಸಿದ್ದರಿಂದ ಪರಿವರ್ತನಾ ರ್ಯಾಲಿಯ ಗಿಮಿಕ್ ಮಾಡುತ್ತಿದ್ದಾರೆ. ಇದಕ್ಕೆ ಪ್ರಜ್ಞಾವಂತ ಮತದಾರರು ಯಾವುದೇ ಕಾರಣಕ್ಕೂ ಸ್ಪಂದಿಸುವುದಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಅಧಿಕಾರ ನೀಡುವ ಮೂಲಕ ಬಡವರ, ಹಿಂದುಳಿದ ವರ್ಗಗಳ ಹಾಗೂ ದಲಿತರ, ಶೋಷಿತರ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಈ ಬಾರಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಉಣಿಸುವ ಮೂಲಕ ಕಾಂಗ್ರೆಸ್ಗೆ ಆರ್ಶೀವಾದ ಮಾಡಬೇಕು ಆ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಜನತೆ ಮುಂಬರುವ 2018ರ ವಿಧಾನ ಸಭಾ ಚುನಾವಣೆಯಲ್ಲಿ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಾನಪ್ಪ ಕಬ್ಬೇರ, ಸ್ವಾತಿ ಮಳಗಿ, ರಾಬರ್ಟ ದದ್ದಾಪುರಿ, ಸುಭಾಸ ಶಿಂಧೆ, ನಾಗರಾಜ ಗುರಿಕಾರ, ಅಶೋಕ ತುರಾರಿ, ಸೇರಿದಂತೆ ರಾಜೀವ ಗಾಂಧಿ ನಗರದ ಗುರು ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.