BREAKING NEWS(click on the news)----------
  • ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯ : ಹೆಚ್.ಡಿ. ಕುಮಾರಸ್ವಾಮಿ


    Date : 2017-11-13 SHARE

    ಬೆಳಗಾವಿ : ಕಳೆದ ಹಲವು ದಶಕಗಳಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಈ ಭಾಗದ ನಾಲ್ಕು ಜಿಲ್ಲೆಗಳ 13 ತಾಲೂಕಿನ ಲಕ್ಷಾಂತರ ಜನರ ಜೀವನಾಡಿಯಾದ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಹಾಗೂ ರೈತರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ನವೆಂಬರ್ 14ರಂದು ಮಂಗಳವಾರ ಬೆಳಗ್ಗೆ 12 ಗಂಟೆಗೆ ಸಿಪಿಎಡ್ ಮೈದಾನದಲ್ಲಿ ಉತ್ತರ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರ ಯಾತ್ರೆಯ ಸಮಾರೋಪ ಹಾಗೂ ಬೆಳಗಾವಿ ವಿಭಾಗಮಟ್ಟದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ಉತ್ತರ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರ ಯಾತ್ರೆಯ ಸಮಾರೋಪ ಸಮಾರಂಭದ ಅಂತಿಮ ಕ್ಷಣದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ನವೆಂಬರ್ 7ರಂದು ರಾಯಚೂರಿನಿಂದ ಆರಂಭವಾಗಿರುವ ಉತ್ತರ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರ ಯಾತ್ರೆಯೂ ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಮೂಲಕ 14ರಂದು ಬೆಳಗಾವಿ ತಲುಪಲಿದ್ದು, ಅದರ ಸಮಾರೋಪ ಸಮಾರಂಭದ ಅಂಗವಾಗಿ ಜೆಡಿಎಸ್‍ನಿಂದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೆಗೌಡ ಅವರು ಈ ಸಮಾವೇಶ ಉದ್ಘಾಟಿಸಲಿದ್ದು, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಎಸ್. ಹೊರಟ್ಟಿ, ಮಾಜಿ ಸಂಸದ ಹೆಚ್. ವಿಶ್ವನಾಥ, ಮಾಜಿ ಸಚಿವ ಪಿಜಿಆರ್ ಸಿಂಧ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಖ್, ಮಂಡ್ಯ ಸಂಸದ ಪುಟ್ಟರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಸಿ. ನೀರಾವರಿ, ಸೇರಿದಂತೆ ಪಕ್ಷದ ಅನೇಕ ಹಿರಿಯ ಮುಖಂಡರು ಅವರಿಗೆ ಸಾಥ್ ನೀಡಲಿದ್ದಾರೆ. ಈ ಸಮಾವೇಶದಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲ ಜೆಡಿಎಸ್ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಪಂ, ತಾಪಂ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜೆಡಿಎಸ್ ಜಿಲ್ಲಾಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಈ ಸಮಾವೇಶದ ಮುಖ್ಯ ಉದ್ದೇಶ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರ ಹಾಗೂ ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರುವುದಾಗಿದೆ. ರಾಜ್ಯದ ಜನತೆ ಈಗಾಗಲೇ ಪ್ರಾದೇಶಿಕ ಪಕ್ಷ ಜೆಡಿಎಸ್‍ನತ್ತ ಹೆಚ್ಚಿನ ಒಲುವು ತೋರುತ್ತಿದ್ದು, ಈಗಾಗಲೇ ಕುಮಾರಸ್ವಾಮಿಯವರು ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯಿಂದ ಆರಂಭಿಸಿರುವ ಕರ್ನಾಟಕ ವಿಕಾಸ ಯಾತ್ರೆಗೆ ಎಲ್ಲಡೆ ಅಭೂತಪೂರ್ವ ಸ್ಪಂದನೆ ದೊರೆಕಿದ್ದು, ಅದರ ಮುಂದುವರೆದ ಭಾಗವಾಗಿ ಶಿವಮೊಗ್ಗ ಹಾಗೂ ದಾವಣಗೆರೆಯಲ್ಲೂ ಕೂಡ ಬೃಹತ್ ಸಮಾವೇಶ ಯಶಸ್ಸು ಕಂಡಿವೆ. ಇದೀಗ ಉತ್ತರ ಕರ್ನಾಟಕದ ಬೆಳಗಾವಿಯಲ್ಲೂ ಕೂಡ ಜೆಡಿಎಸ್‍ನ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು. ಕಳೆದ ಹಲವು ವರ್ಷಗಳಿಂದ ಮಹದಾಯಿ, ಕಳಸಾ-ಬಂಡೂರಿಗಾಗಿ ನವಲಗುಂದ-ನರಗುಂದದಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಆದರೂ ಈವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎರಡು ರಾಷ್ಟ್ರಿಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿ, ಕಾಲಹರಣ ಮಾಡುತ್ತಿವೆ. ಇವುಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಈ ಬಾರಿಯ ಬೆಳಗಾವಿಯ ಅಧಿವೇಶನದಲ್ಲಿ ಜೆಡಿಎಸ್‍ನಿಂದ ಹಕ್ಕೋತ್ತಾಯ ಮಂಡಿಸುವ ಜೊತೆಗೆ ಬೃಹತ್ ಸಮಾವೇಶದ ಮೂಲಕ ಎರಡು ಸರ್ಕಾರಗಳಿಗೆ ಬಿಸಿ ತಾಕಿಸಲಾಗುವುದು ಎಂದರು. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರು ಅವರು ಕೇವಲ 10-15 ದಿನಗಳಲ್ಲಿ ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಬಗೆಹರಿಸಿಯೇ ಈ ಭಾಗಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರು ಈ ಭಾಗಕ್ಕೆ ನವಕರ್ನಾಟಕ ನಿರ್ಮಾಣ ಪರಿವರ್ತನಾ ರ್ಯಾಲಿ ತೆಗೆದುಕೊಂಡು ಬರುವ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದು ಒತ್ತಾಯಿಸಿದರು. ಕಳೆದ ಒಂದು ವರ್ಷದಿಂದ ಲಕ್ಷಾಂತರ ರೈತರು ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಪರಿಹಾರ ಹಣ ಬಿಡುಗಡೆಗಾಗಿ ಕಂದಾಯ ಇಲಾಖೆಯ ಕಚೇರಿ ಅಲೆದಾಡುತ್ತಿದ್ದಾರೆ. ತಾಲೂಕು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೇಲೆ ಸಮಸ್ಯೆ ಹೊತ್ತು ಹಾಕಿದರೆ, ಜಿಲ್ಲಾಡಳಿತ ರಾಜ್ಯದ ಮೇಲೆ, ರಾಜ್ಯ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಇದರಿಂದಾಗಿ ರೈತರು ಪರದಾಡುವಂತಾಗಿದೆ. ಖಾಸಗಿ ವಿಮಾ ಕಂಪನಿಯ ಎದುರು ಈ ಎರಡು ಸರ್ಕಾರಗಳು ಶರಣಾಗಿವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೆ ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರ ಸಂಪೂರ್ಣ ಸಾಲಮನ್ನಾ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಜನರ ಆರ್ಶೀವಾದದಿಂದ ಜೆಡಿಎಸ್ ಸರ್ಕಾರ 2018ರಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಹಕಾರಿ ಹಾಗೂ ರಾಷ್ಟ್ರಿಕೃತ ಬ್ಯಾಂಕ್‍ಗಳಲ್ಲಿನ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಕುಮಾರಸ್ವಾಮಿಯವರ ಘೋಷಣೆಯೇ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ನವಲಗುಂದ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.