BREAKING NEWS(click on the news)----------
  • ಉತ್ತರ ಕರ್ನಾಟಕ ಭಾಗದ ಜನರ ಆಶಯಗಳಿಗೆ ಸ್ಪಂದಿಸಿ : ಹೆಚ್. ಡಿ. ಕುಮಾರಸ್ವಾಮಿ


    Date : 2017-11-13 SHARE

    ಈ ಬಾರಿಯ ಬೆಳಗಾವಿಯ ಅಧಿವೇಶನದಲ್ಲಿಯಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆಯಾಗಬೇಕು. ರಾಜ್ಯದ ರೈತರು ಸಂಕಷ್ಠಕ್ಕೆ ಒಳಗಾಗಿದ್ದಾರೆ. ರೈತರ ಬೆಳೆಗೆ ಉತ್ತಮ ಬೆಲೆ ನೀಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಾದರೂ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಸಕ್ಕರೆ ಕಾರ್ಖಾನೆಗಳು ಮುಚ್ಚಿ ರೈತರಿಗೆ ಸಂಕಷ್ಟ ತಂದೊಡ್ಡುವ ಕುಕೃತ್ಯ ನಡೆಯುತ್ತಿದೆ. ಸರ್ಕಾರ ಇದನ್ನ ಗಮನಿಸಬೇಕಾಗಿದೆ. ಇಂತಹ ಸಮಸ್ಯೆಗಳ ಕುರಿತು ಚರ್ಚಿಸಲು ಎರಡು ರಾಷ್ಟ್ರೀಯ ಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿದರು ಸದನ ಸುಗಮವಾಗಿ ನಡೆಯಲು ಸಹಕರಿಸಿ: ಬಿಜೆಪಿಯವರು ಅಧಿವೇಶನದಲ್ಲಿ ಸಚಿವ ಜಾರ್ಜ್ ಪ್ರಕರಣಕ್ಕೆ ಆದ್ಯತೆ ಕೊಡ್ತೀವಿ ಅಂತಾರೆ. ಉಳಿದ 9 ದಿನಗಳ ಅಧಿವೇಶನದಲ್ಲಿ ಉತ್ತಮ ವಿಚಾರಗಳ ಚರ್ಚೆ ಆಗ ಬೇಕು. ಕಾಟಾಚಾರಕ್ಕೆ ಕಲಾಪ ನಡೆಸುತ್ತಾರೆ ಎನ್ನುವ ಆರೋಪವಿದೆ. ಮತ್ತೆ ಅದೇ ವಾತಾವರಣ ಮುಂದುವರೆಸುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು. ಬಿಜೆಪಿಯವರು ಸದನದಲ್ಲಿ ಪ್ರತಿಭಟನೆಗೆ ನಿಂತರೆ, ಮಹತ್ವದ ವೈದ್ಯಕೀಯ ಬಿಲ್ ಪಾಸ್ ಮಾಡಿಕೊಳ್ಳುತ್ತಾರೆ. ಆ ಬಿಲ್ ನಲ್ಲಿ ಹಲವಾರು ನ್ಯೂನ್ಯತೆಗಳಿವೆ, ಇದರಿಂದ ಸಾರ್ವಜನಿಕರಿಗೂ ತೊಂದರೆ ಇದೆ. ಈ ವಿಷಯವಾಗಿ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡುತ್ತೇನೆ. ಮಹತ್ವದ ವಿಷಯಗಳ ಕುರಿತು ಚರ್ಚೆ ಮಾಡಿ ಸದನದ ಕಲಾಪ ಸುಗಮವಾಗಿ ನಡೆಯಲು ಸಹಕರಿಸಿ ಎಂದರು.