ಗರಗ ಮಡಿವಾಳೇಶ್ವರ ಕಲ್ಮಠದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
Date : 2017-11-13 SHARE
ಧಾರವಾಡ : ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಜನರ ಮನೆ ಮನದಲ್ಲಿ ಚಿರಸ್ಥಾಯಿಯಗಿ ಉಳಿದಿರುವ ಪವಾಡ ಪುರುಷ ಗರಗನ ಜಗದ್ಗುರು ಶ್ರೀ ಮಡಿವಾಳೇಶ್ವರ ಅಜ್ಜನವರ ಲಕ್ಷ ದೀಪೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಧಾರವಾಡ ಸೇರಿದಂತೆ ವಿವಿಧೆಡೆಯಿಂದ ಹರಿದು ಬಂದ ಲಕ್ಷಾಂತರ ಭಕ್ತರು ಗರಗ ಮಡಿವಾಳೇಶ್ವರರ ಸನ್ನಿಧಿಯಲ್ಲಿ ವಿಶೇಷ ಪೂಜೆ ಪಾರ್ಥನೆ ಸಲ್ಲಿಸಿ, ಅಜ್ಜನವರ ಕೃಪಾರ್ಶೀವಾದಕ್ಕೆ ಪಾತ್ರರಾದರು. ಆನಂತರ ದೇವಸ್ಥಾನದ ಎದುರುಗಡೆ ಹಾಕಲಾಗಿದ್ದ ಎರಡು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನಾಡಿನ ವಿವಿಧ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷರಾದ ಅಮೃತ ದೇಸಾಯಿ ಅವರು ಜ್ಯೋತಿ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಆ ಬಳಿಕ ಮಕ್ಕಳಿಂದ ಹಿಡಿದು, ವಯೋವೃದ್ಧವರೆಗೆ ಮಹಿಳೆಯರು ಪುರುಷರು ಎನ್ನದೆ ಎಲ್ಲರೂ ದೀಪ ಹಚ್ಚುವ ಮೂಲಕ ಮನೆ ಹಾಗೂ ಮನದ ಬೆಳಕು ಚೆಲ್ಲಿ ಪುನೀತರಾದರು. ಕೋಮು ಸೌಹಾರ್ದತೆಗೂ ಸಾಕ್ಷಿ : ಗರಗನ ಮಡಿವಾಳೇಶ್ವರ ಕಲ್ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಕೋಮು ಸೌಹಾರ್ದತೆಗೂ ಸಾಕ್ಷಿಯಾಯಿತು. ಹಿಂದು ಮುಸ್ಲಿಂರೆನ್ನದೆ ಎಲ್ಲರೂ ಜಾತಿ, ಮತ, ಧರ್ಮದ ಭೇದ ಭಾವ ಮರೆತು ದೀಪೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರೆದರು. ಎಣ್ಣೆ, ಬತ್ತಿಯ ಸಾಲು ಸಾಲು ದೀಪಗಳು ಭಕ್ತರ ಕಣ್ಮನ ಸೊರೆಗೊಂಡವು. ಚನ್ನಬಸವ ಶ್ರೀಗಳಿಗೆ 50ಕ್ಕೂ ಹೆಚ್ಚು ತುಲಾಭಾರ : ಇದೇ ವೇಳೆ ಶ್ರೀ ಗುರು ಮಡಿವಾಳೇಶ್ವರ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿ, ಯಶಸ್ವಿಯಾಗಿ 50 ವಸಂತಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಶ್ರೀಗಳ ಸುವರ್ಣ ಮಹೋತ್ಸವ ಹಾಗೂ 81ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮಾಜಿ ಶಾಸಕ ಎ.ಬಿ. ದೇಸಾಯಿ ಹಾಗೂ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಅಮೃತ ದೇಸಾಯಿ ಕುಟುಂಬ ವರ್ಗ ಸೇರಿದಂತೆ 50ಕ್ಕೂ ಹೆಚ್ಚು ಸದ್ಭಕ್ತರಿಂದ ಪರಮ ಪೂಜ್ಯರಿಗೆ ತುಲಾಭಾರ ನೆರವೇರಿಸಲಾಯಿತು.