ಮುಂದುವರೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ : ಸೂಕ್ತ ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳ ಕದ ತಟ್ಟಿ ಸುಸ್ತಾದ ರೋಗಿಗಳು
Date : 2017-11-15 SHARE
ಧಾರವಾಡ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಮಸೂದೆ ಮಂಡನೆಗೆ ಮುಂಧಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಮುಂದೆವರೆದಿದೆ. ಇದರಿಂದ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳ ಕದ ತಟ್ಟಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಾವುದೇ ಆಸ್ಪತ್ರೆ ಮುಂದೆ ಹೋದರೂ ಆಸ್ಪತ್ರೆ ಬಂದ್ ಏಫೆಕ್ಟ್ ಕಾಣ ಸಿಗುತ್ತಿದೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಎಲ್ಲರು ಮರಳಿ ಗೂಡು ಸೇರುವಂತಾಗಿದೆ. ಧಾರವಾಡ ಜಿಲ್ಲೆಯ 150ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಆಸ್ಪತ್ರೆ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಸುಮಾರು 300ಕ್ಕೂ ಹೆಚ್ಚು ಧಾರವಾಡದ ವೈದ್ಯರು ಬೆಳಗಾವಿ ಚಲೋದಲ್ಲಿ ಪಾಲ್ಗೊಂಡಿರುವುದರಿಂದ ಧಾರವಾಡದ ಬಹುತೇಕ ಆಸ್ಪತ್ರೆಗಳ ಬಾಗಿಲು ಬಂದ್ ಆಗಿವೆ. ರೋಗಿಗಳು ವೈದ್ಯರಿಗೆ ಹಿಡಿಶಾಪ ಹಾಕಿ ಮನೆಯತ್ತ ಹೆಜ್ಜೆ ಹಾಕಿದರೆ, ವೈದ್ಯರು ಸರ್ಕಾರದ ವಿರುದ್ಧ ಮುನಿಸಿಕೊಂಡು ಸಮರ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ವೈದ್ಯರ ಹೋರಾಟಕ್ಕೆ ಮಣಿಯುವ ಲಕ್ಷಣಗಳು ಕಾಣುತ್ತಿಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿ ಮಾಡಿಯೇ ಸಿದ್ಧ ಎನ್ನುವಂತಾಗಿದೆ. ಈ ಜಗ್ಗ ಹಗ್ಗಾಟ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.