BREAKING NEWS(click on the news)----------
  • ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ನ್ಯಾ. ಸದಾಶಿವ ಆಯೋಗದ ವರದಿ ಮಂಡಿಸಲು ಒತ್ತಾಯ


    Date : 2017-11-15 SHARE

    ಧಾರವಾಡ : ಈ ಬಾರಿಯ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೇ ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಮಂಡಿಸಿ, ಅದಕ್ಕೆ ಅನುಮೋದನೆ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಾದಿಗ ಮೀಸಲಾತಿ ಶಿಫಾರಸ್ಸು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೀಶ ನಾಗಣ್ಣನವರ ಆಗ್ರಹಿಸಿದ್ದಾರೆ. ಅವರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದರು, ಕಳೆದ ಹಲವು ವರ್ಷಗಳ ಹಿಂದೆಯೇ ನ್ಯಾ. ಎ.ಜೆ. ಸದಾಶಿವ ಅವರು ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೆ ತರುವಂತೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದರೂ, ಈವರೆಗೆ ರಾಜ್ಯ ಸರ್ಕಾರ ಅದರ ಅನುಷ್ಠಾನಕ್ಕೆ ಮುಂದಾಗಿಲ್ಲ. ಅಲ್ಲದೆ, ಅನಗತ್ಯ ಕಾಲಹರಣ ಮಾಡುತ್ತಾ ಬಂದಿದೆ. ರಾಜಕೀಯ ವೇದಿಕೆಯಲ್ಲಿ ಒಳ ಮೀಸಲಾತಿಯ ಬಗ್ಗೆ ಮಾತನಾಡುವ ಬಹುತೇಕ ರಾಜಕೀಯ ಮುಖಂಡರು ಸದನದ ಒಳಗೆ ಏಕೆ ಮೌನವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕ್ರಾಂತಿಗೀತೆಗಳನ್ನು ಹಾಡುವುದರ ಮೂಲಕ ದಿನವೀಡಿ ಹೋರಾಟದ ಕಿಚ್ಚು ಹೆಚ್ಚಿಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಸಪ್ಪ ಮಾದರ, ಸುರೇಶ ಖಾನಾಪೂರ, ಮಾಲಾ ತುರಿಹಾಳ, ಪ್ರಕಾಶ ಪಾಗಲಾಪೂರ, ಸಿದ್ಧಾರ್ಥ ಮಲ್ಲಮ್ಮನವರ, ರಾಜೇಶ ನಿರಲಕೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.