ವೈದ್ಯರ ಮುಷ್ಕರಕ್ಕೆ ಧಾರವಾಡದಲ್ಲಿ ಯುವಕ ಬಲಿ: ರಾಜ್ಯ ಸರಕಾರ ವಿರುದ್ದ ರೋಗಿಗಳ ಆಕ್ರೋಶ
Date : 2017-11-16 SHARE
ಧಾರವಾಡ: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟ ಬೆನ್ನ ಹಿಂದೆಯೇ ಯುವಕನೊಬ್ಬ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ ಹೊಸ ಯಲ್ಲಾಪುರ ಬಡಾವಣೆಯ ಸಮೀಪದ ಆರೇರ ಓಣಿ ನಿವಾಸಿಯಾಗಿದ್ದ ಕಾರ್ತಿಕ್ ರೋಕಡೆ (೨೫) ಸಾವನ್ನಪ್ಪಿದ ಯುವಕ. ಇಂದು ಬೆಳಿಗ್ಗೆ ೫.೩೦ ಸುಮಾರಿಗೆ ಏದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ವಾಂತಿಯಾಗಿ ಮೂರ್ಚ ಹೋಗಿದ್ದ. ತಕ್ಷಣ ಆತನ ಸಂಬಂಧಿಕರು ಸಮೀಪದ ಡಾ. ಎಸ್.ಆರ್. ರಾಮನಗೌಡರ ಹಾಗೂ ಜರ್ಮನ್ ಆಸ್ಪತ್ರೆ ಗೆ ಕರೆದುಕೊಂಡು ಹೋದರು. ಆದರೆ ಅಲ್ಲಿ ವೈದ್ಯರ ಮುಷ್ಕರದಿಂದಾಗಿ ಕೊನೆಗೆ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಷ್ಟರೊಳಗೆ ಕಾರ್ತಿಕ ಗೆ ಹೃದಯಾಘಾತಗಿತ್ತು. ಚಿಕಿತ್ಸೆ ದೊರೆಯುವ ಮುನ್ನವೇ ಇಹಲೋಕ ತ್ಯಜಿಸಿದ್ದಾನೆ. ಈ ಕುರಿತು ಪ್ರಜಾಕಿರಣ ದೊಂದಿಗೆ ಮಾತನಾಡಿದ ಬಿಜೆಪಿ ಯುವ ಮುಖಂಡ ಅರವಿಂದ ಏಗನಗೌಡರ, ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ ಕುಟುಂಬಸ್ಥರು, ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ಆಸ್ಪತ್ರೆಗೆ ಬರೋದರಲ್ಲಿಯೇ ಯುವಕ ಕಾರ್ತಿಕ ಮೃತ ಪಟ್ಟಿದ್ದಾನೆ. ಇದು ತೀವ್ರ ನೋವಿನ ಸಂಗತಿಯಾಗಿದೆ. ವೈದ್ಯರ ಮುಷ್ಕರ ಧಾರವಾಡದಲ್ಲೇ ಇಬ್ಬರ ಬಲಿ ಪಡೆದಿದೆ. ರಾಜ್ಯಾದ್ಯಂತ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಸರಕಾರ ಮೊಂಡುವಾದ ಬಿಟ್ಟು ವೈದ್ಯರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ರೋಗಿಗಳ ಪ್ರಾಣ ರಕ್ಷಣೆಗೆ ಬದ್ದತೆ ತೋರುವ ಮೂಲಕ ಸಮಸ್ಯೆಗೆ ತೆರೆ ಎಳೆಬೇಕು ಎಂದು ಆಗ್ರಹಿಸಿದ್ದಾರೆ. ಮುಗಿಲು ಮುಟ್ಟಿದ ಆಕ್ರಂದನ: ಯುವಕ ಕಾರ್ತಿಕ ಸಾವಿನ ಹಿನ್ನೆಲೆಯಲ್ಲಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ೨೬ರಂದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ವೈದ್ಯರ ಮುಷ್ಕರದಿಂದಾಗಿ ಬಾರದ ಲೋಕಕ್ಕೆ ಹೋಗಿರುವುದು ದುರಂತವೇ ಸರಿ.