BREAKING NEWS(click on the news)----------
  • ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ ರೋಗಿಗಳು : ಒಳ ರೋಗಿಗಳ ಸಂಖ್ಯೆ ಎರಡು ದಿನದಲ್ಲೇ ದ್ವಿಗುಣ


    Date : 2017-11-15 SHARE

    ಧಾರವಾಡ: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಮುಂದುವರೆದ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು ಮುಖ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಒಂದು ದಿನಕ್ಕೆ ಸರಾ ಸರಿ ಕೇವಲ ಸಾವಿರ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು. ಆದರೆ ಅದೀಗ ಹದಿನೈದು ನೂರರ ಗಡಿ ದಾಟಿದ್ದು, ಹಗಲು ರಾತ್ರಿಯನ್ನೆದೆ ಎಲ್ಲ ವೈದ್ಯರು ಚಿಕಿತ್ಸೆಗೆ ಹಾಜರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳು ಬಂದ್ ಆದಾಗಿನಿಂದ ಕೇವಲ ಮೂರು ದಿನದಲ್ಲೇ ಒಳ ರೋಗಿಗಳು ಸಂಖ್ಯೆ ದ್ವಿಗುಣಗೊಂಢಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಹೆಚ್ಚಿನ ಬೆಡ್ ವ್ಯವಸ್ಥೆ, ಔಷಧೋಪಚಾರ ಸೇರಿದಂತೆ ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದ್ದೇವೆ ಎಂದು ಧಾರವಾಡ ಜಿಲ್ಲಾಸ್ಪತ್ರೆಯ ಪ್ರಭಾರಿ ಶಸ್ತ್ರಚಿಕಿತ್ಸಕ ಡಾ. ನಾಡಗೌಡ ತಿಳಿಸಿದ್ದಾರೆ. ಎಲ್ಲ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದು, ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಮುಗಿಯುವರೆಗೆ ಯಾರೊಬ್ಬರಿಗೂ ರಜೆ ಸಹ ನೀಡುತ್ತಿಲ್ಲ. ಸರದಿ ಪ್ರಕಾರ ಎಲ್ಲ ವೈದ್ಯರು ಸೇವೆಗೆ ಹಾಜರಾಗಿ ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲ ರೋಗಿಗಳ ಉಪಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಒಟ್ಟಿನಲ್ಲಿ ಕೇವಲ ಮೂರು ದಿನಗಳಲ್ಲಿ ಧಾರವಾಡ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.