ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಸಚಿವ ವಿನಯ ಕುಲಕರ್ಣಿ ಗರಂ: ಮುಖ್ಯಮಂತ್ರಿ ವಿರುದ್ಧ ಮಾತನಾಡುವ ಭರದಲ್ಲಿ ತಮ್ಮ ಲೇವಲ್ ತೋರಿಸಿದ ಸಚಿವರು
Date : 2017-11-18 SHARE
ಧಾರವಾಡ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವುದು ಅವರ ಲೇವಲ್ ತೋರಿಸಿದೆ ಎಂದು ಗಣಿ ಸಚಿವ ವಿನಯ ಕುಲಕರ್ಣಿ ಅವರು ವಾಗ್ದಾಳಿ ನಡೆಸಿದರು. ಅವರು ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬ ಕೇಂದ್ರ ಸಚಿವರಾಗಿ ಅನಂತಕುಮಾರ ಹೆಗಡೆ ಅವರು ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಇದು ಅವರ ಯೋಗ್ಯತೆ ತೋರಿಸುತ್ತದೆ. ಇದರಿಂದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘನತೆ ಕಡಿಮೆ ಆಗಲ್ಲ. ಬದಲಿಗೆ ಇದು ಅವರ ಗುಣಮಟ್ಟ ಮತ್ತು ಯೋಗ್ಯತೆ ಪ್ರದರ್ಶಿಸುತ್ತಿದೆ ಎಂದರು, ರಾಜಕಾರಣದಲ್ಲಿ ಟೀಕೆ ಟಿಪ್ಪಣೆಗಳು ಸಹಜ. ಆದರೆ ಈ ರೀತಿ ಕೆಳಮಟ್ಟದ ಭಾಷಣ ಸರಿಯಲ್ಲ. ಇದನ್ನು ಯಾರು ಗಂಭಿರವಾಗಿ ಪರಿಗಣಿಸುವುದಲ್ಲ. ಇದರಿಂದ ಅನಂತಕುಮಾರ ಹೆಗೆಡೆ ಅವರ ವ್ಯಕ್ತಿತ್ವ ಕಡಿಮೆಯಾಗುತ್ತದೆ, ಹೊರತು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘನತೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ವಿನಯ ಕುಲಕರ್ಣಿ ಅವರು ಬಿಜೆಪಿಗೆ ದಷ್ಟಪುಷ್ಟ ಮಕ್ಕಳನ್ನು ಹಡಿಯುವ ತಾಕತ್ ಇಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ, ಪ್ರಮೋದ ಮಧ್ವರಾಜ್ ಸೇರಿದಂತೆ ಅನೇಕರನ್ನು ಸೆಳೆಯುವ ವ್ಯರ್ಥ ಕಸರತ್ತು ಮಾಡುತ್ತಿದೆ. ಇಂತಹ ಆಪರೇಶನ್ ಕಮಲಕ್ಕೆ ನಮ್ಮವರು ಯಾರು ಬಲಿಯಾಗುವುದಿಲ್ಲ. ಅಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರ ಐಟಿ ರೇಡ್ ಹೆಸರಿನಲ್ಲಿ ಬ್ಲಾಕ್ ಮೇಲ್ ಪಾಲಿಟಿಕ್ಸ್ ಮಾಡುತ್ತಿದೆ. ವೈಯಕ್ತಿಕ ವ್ಯವಹಾರಗಳಲ್ಲಿ ಕೈ ಹಾಕುವ ಮೂಲಕ ಹೆದರಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ. ಜಗ್ಗುವುದಿಲ್ಲ. ಅಲ್ಲದೆ, ಇದು ಬಹಳ ದಿನ ನಡೆಯುವುದಿಲ್ಲ ಎಂದು ಸಚಿವ ವಿನಯ ಕುಲಕರ್ಣಿ ಎಚ್ಚರಿಸಿದರು.