ಅಮೃತ ದೇಸಾಯಿ ನೇತೃತ್ವದಲ್ಲಿ ಗರಗದಿಂದ ಉಳವಿಗೆ ನಾಲ್ಕು ದಿನಗಳ ಪಾದಯಾತ್ರೆ ಆರಂಭ
Date : 2017-11-19 SHARE
ಧಾರವಾಡ : ತಾಲೂಕಿನ ಗರಗದಿಂದ ಉಳವಿಯವರೆಗೆ ನಾಲ್ಕು ದಿನಗಳ ಪಾದಯಾತ್ರೆಗೆ ಗರಗದ ಮಡಿವಾಳೇಶ್ವರ ಕಲ್ಮಠದ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷರಾದ ಅಮೃತ ದೇಸಾಯಿ ಅವರು ಭಾನುವಾರ ಆರಂಭಿಸಿದ್ದಾರೆ. ಪ್ರ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಲಭಿಸಬೇಕಾದರೆ, ಆಧಾತ್ಮಿಕ ಹಾಗೂ ಧಾರ್ಮಿಕ ಚಿಂತನೆಗಳು ಅಗತ್ಯವಾಗಿದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ಉತ್ತಮ ಬದುಕು ಸಾಗಿಸಬೇಕಿದೆ. ಯುವಕರಲ್ಲಿ ಶ್ರದ್ಧೆ, ಭಕ್ತಿ ಮೂಡಿಸುವ ಉದ್ದೇಶದಿಂದ ಗರಗದ ಮಡಿವಾಳೇಶ್ವರ ಕಲ್ಮಠ ಮಠದ ಚನ್ನಬಸವ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಶ್ರೀಮಠದಿಂದ ಹಮ್ಮಿಕೊಳ್ಳಲಾಗಿದೆ. ಅದರ ಮುಂದುವರೆದ ಭಾಗವಾಗಿ ಶ್ರೀಗಳ ಆಪೇಕ್ಷೆಯಂತೆ ಲಕ್ಷ ದೀಪೋತ್ಸವದ ನಂತರ ನಾಲ್ಕು ದಿನಗಳ ಕಾಲ ಗರಗದ ಮಡಿವಾಳೇಶ್ವರ ಕಲ್ಮಠದಿಂದ ಉಳವಿಯ ಚನ್ನಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಅಮೃತ ದೇಸಾಯಿ “ಪ್ರಜಾಕಿರಣ” ಗೆ ತಿಳಿಸಿದರು. ಗರಗದ ಮಡಿವಾಳೇಶ್ವರ ಕಲ್ಮಠ ಮಠದ ಚನ್ನಬಸವ ಮಹಾಸ್ವಾಮಿಗಳು 81 ರ ಇಳಿವಯಸ್ಸಿನಲ್ಲಿಯೂ ಪಾದಯಾತ್ರೆಯಲ್ಲಿ ಹೆಜ್ಜೆಗಳನ್ನು ಹಾಕುವ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆ ನೀಡಿದರು. ನರೇಂದ್ರದಲ್ಲಿ ಶ್ರೀಗಳ ಪಾದಪೂಜೆ : ಗರಗದಿಂದ ಆರಂಭಗೊಂಡ ಪಾದಯಾತ್ರೆಗೆ ನರೇಂದ್ರ ಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಬರ ಮಾಡಿಕೊಂಡರು. ಈ ವೇಳೆ ಗರಗದ ಮಡಿವಾಳೇಶ್ವರ ಕಲ್ಮಠ ಮಠದ ಚನ್ನಬಸವ ಮಹಾಸ್ವಾಮಿಗಳ ಪಾದಪೂಜೆ ನೆರವೇರಿಸಿ ಧನ್ಯತಾ ಭಾವ ಮೆರೆದರು. ಪಾದಯಾತ್ರೆಯಲ್ಲಿ ಗರಗ, ಹಂಗರಕಿ, ಮಂಗಳಗಟ್ಟಿ, ನರೇಂದ್ರ ಸೇರಿದಂತೆ ಹಲವು ಗ್ರಾಮದ ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು. ಪಾದಯಾತ್ರೆಯಲ್ಲಿ ಅಶೋಕ ದೇಸಾಯಿ, ಪ್ರಿಯಾ ಅಮೃತ ದೇಸಾಯಿ, ಮಹೇಶ ಯಲಿಗಾರ, ಪ್ರೇಮಾಕೋಮಾರ ದೇಸಾಯಿ, ಎಪಿಎಂಸಿ ಸದಸ್ಯ ಚನ್ನವೀರ ಗೌಡ ಪಾಟೀಲ, ಬಸೂ ಹೊಸೂರ, ಎಂ.ಎಂ. ಮಾಳಾಪುರ, ಅರವಿಂದ ಗೌಡಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.