ಬಸವಾನಂದ ಸ್ವಾಮೀಜಿ ರಾಜಕೀಯ ಪ್ರವೇಶ ಹಿನ್ನಲೆ * ಮನಗುಂಡಿಯಲ್ಲಿ ನೂರಾರು ಭಕ್ತರ ಸಭೆ ಕಲಘಟಗಿ ವಿಧಾನ ಸಭಾ ಕ್ಷೇತ್ರದಿಂದ ಶ್ರೀಗಳು ಬಿಜೆಪಿ ಅಭ್ಯರ್ಥಿಯಾಗಲಿ : ಭಕ್ತರ ಹಕ್ಕೋತ್ತಾಯ
Date : 2017-11-16 SHARE
ಧಾರವಾಡ : ಇಲ್ಲಿಯ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಆವರಣದಲ್ಲಿ ಬುಧವಾರ ಸಂಜೆ ಬಸವಾನಂದ ಶ್ರೀಗಳ ನೂರಾರು ಭಕ್ತರ ಸಭೆ ನಡೆಯಿತು. ಬಸವಾನಂದ ಸ್ವಾಮೀಜಿಗಳು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಚಿಂತನೆ ನಡೆಸಿರುವ ಹಿನ್ನಲೆಯಲ್ಲಿ ಸಭೆ ಸೇರಿದ ಭಕ್ತಾದಿಗಳು ಈ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಮುಖಂಡರಾದ ಅರ್ಜುನ ಪತ್ರಣ್ಣವರ, ಶಿವಣ್ಣ ಹೊಂಬೇರಿ, ಚನ್ನಪ್ಪ ಹಳಿಯಾಳ ಸೇರಿದಂತೆ ಅನೇಕರು ಸಭೆಯಲ್ಲಿ ಮಾತನಾಡಿ, ಬಸವಾನಂದ ಸ್ವಾಮೀಜಿಯವರು ಕಳೆದ ಹಲವು ದಶಕಗಳಿಂದ ಮನಗುಂಡಿ ಗ್ರಾಮದಲ್ಲಿ ನೆಲೆಸಿ, ಯೋಗ, ಪ್ರಕೃತಿ ಚಿಕಿತ್ಸೆ, ಪುಸ್ತಕ ಪ್ರಕಾಶನ, ಗೋಶಾಲೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಕೀರ್ತಿಯನ್ನು ದೇಶ ವಿದೇಶದಲ್ಲಿ ಹಬ್ಬಿಸಿದ್ದಾರೆ. ಜನರ ಆರೋಗ್ಯ ಸುಧಾರಣೆಗಾಗಿ, ಅಂರ್ತಜಲ ಮಟ್ಟ ಹೆಚ್ಚಳಕ್ಕಾಗಿ ಮಳೆ ಕೊಯ್ಲು ಯೋಜನೆ, ಧಾರ್ಮಿಕ ಪ್ರವಚನ ಸೇರಿದಂತೆ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನ ಮನ ಸೊರೆಗೊಂಡಿದ್ದಾರೆ. ಹೀಗಾಗಿ ಬಸವಾನಂದ ಸ್ವಾಮೀಜಿಗಳು ರಾಜಕೀಯಕ್ಕೆ ಕಾಲಿಟ್ಟರೆ, ರಾಜಕಾರಣವೂ ಶುದ್ಧೀಕರಣಗೊಳ್ಳಲಿದೆ. ಅಲ್ಲದೆ, ಕಲಘಟಗಿ ವಿಧಾನ ಸಭಾ ಕ್ಷೇತ್ರವೂ ಸರ್ವಾಂಗೀಣ ಅಭಿವೃದ್ಧಿಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಅಲ್ಲದೇ ಭಾರತೀಯ ಜನತಾ ಪಕ್ಷವೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಸವಾನಂದ ಶ್ರೀಗಳನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು. ಆನಂತರ ಬಸವಾನಂದ ಶ್ರೀಗಳೊಂದಿಗೆ ವಿಷಯವನ್ನು ಹಂಚಿಕೊಂಡು ತಮ್ಮ ಸಂತಸ ವ್ಯಕ್ತಪಡಿಸಿ, ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಂತೆ ಒಕ್ಕೂರಿಲಿಂದ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿ.ಎಸ್. ಅಂಗಡಿ, ಅಶೋಕ ಕೌಟಕೊಪ್ಪ, ಮಡಿವಾಳಪ್ಪ ಮರೆವಾಡ, ನಿಂಗಪ್ಪ ಹಡಪದ, ಬಸಪ್ಪ ವಾಲಿಕಾರ, ವಾಯ್, ಎಸ್. ಸೋಮಾಜಿ, ರಾಮಣ್ಣ ಮರಿಲಿಂಗಣ್ಣವರ, ಪರಮೇಶ ಸಲಗಾರ, ಜಗದೀಶ ಶಿಗಿಗಟ್ಟಿ, ಈಶ್ವರ ಅಂಗಡಿ, ಸಿದ್ದರಾಮ ಸಲಗಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.