ರೇಣುಕಾ ಸಾಗರ ಜಲಾಶಯದಿಂದ ಮಲಪ್ರಭಾ ಕಾಲುವೆಗೆ 7 ಟಿಎಂಸಿ ನೀರು ಬಿಡುಗಡೆ
Date : 2017-11-18 SHARE
ಬೆಳಗಾವಿ : ಇಲ್ಲಿಯ ಸುವರ್ಣ ಸೌಧದಲ್ಲಿ ಶುಕ್ರವಾರ ಸಂಜೆ ರೇಣುಕಾ ಸಾಗರ ಜಲಾಶಯದಿಂದ ಮಲಪ್ರಭಾ ಕಾಲುವೆಗೆ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ 7 ಟಿಎಂಸಿ ನೀರನ್ನು ಬಿಡುಗಡೆ ಮಾಡುವ ಕುರಿತಂತೆ ನೀರು ಬಳಕೆದಾರರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಡಿ.ವೈ. ಕಾಡಪ್ಪನವರ ವಹಿಸಿದ್ದರು. ಸಭೆಯಲ್ಲಿ ನರಗುಂದ ಶಾಸಕ ಬಿ.ಆರ್. ಯಾವಗಲ್ ಹಾಗೂ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಾತನಾಡಿ, ರೈತರ ಬೆಳಗಳು ಒಣಗಿ ಹೋಗುತ್ತಿರುವುದರಿಂದ ಹಾಗೂ ಜನರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೂಡಲೇ ನೀರು ಬಿಡುಗಡೆ ಮಾಡುವಂತೆ ಸೂಚಿಸಿದರು. ಶಾಸಕರ ಸೂಚನೆಗೆ ಸ್ಪಂದಿಸಿದ ಮಹಾಮಂಡಳದ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಸರ್ವ ಸಮ್ಮತವಾಗಿ ಒಪ್ಪಿಗೆ ಸೂಚಿಸಿ, ಸಂಜೆಯಿಂದಲೇ ನೀರು ಬಿಡುಗಡೆಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸಭೆಯಲ್ಲಿ ಮಹಾಮಂಡಳ ಸದಸ್ಯರಾದ ಸದುಗೌಡ ಪಾಟೀಲ, ಬಸವರಾಜ ಹರಿವಾಳದ, ಎಂ.ಎಂ. ಮಳ್ಳೂರ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಳ್ಳಿ, ಮುಖ್ಯ ಇಂಜಿನಿಯರ್ ಕ್ಷೇತ್ರ ಪಾಲ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಯಲ್ಲಮ್ಮ ದೇವಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಪೂಜೆ : ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕುಟುಂಬ ಸಮೇತವಾಗಿ ಶುಕ್ರವಾರ ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರೇಣುಕಾ ಸಾಗರ ಜಲಾಶಯದಿಂದ ಮಲಪ್ರಭಾ ಕಾಲುವೆಗೆ 7 ಟಿಎಂಸಿ ನೀರು ಬಿಡುಗಡೆ ಮಾಡಲಾಯಿತು.