ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮತ್ತೇ ಪ್ರತಿಧ್ವನಿಸಿದ ಮಹದಾಯಿ, ಕಳಸಾ-ಬಂಡೂರಿ ಅಧಿವೇಶನದಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಶ್ನೆಯಿಂದ ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಸರ್ಕಾರ
Date : 2017-11-21 SHARE
ಬೆಳಗಾವಿ : ಮಹದಾಯಿ ಜಲ ವಿವಾದ ಕುರಿತಂತೆ ರಾಜ್ಯ ಸರ್ಕಾರ ಈವರೆಗೆ ಕೈಗೊಂಡ ಕ್ರಮಗಳ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಶ್ನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗ ಸೋಮವಾರ ಸಂಜೆ ನಡೆಯಿತು. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಕರ್ನಾಟಕ ವಿಧಾನ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಒಂದೂವರೆ ವರ್ಷ ಕಳೆದರೂ ಈವರೆಗೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಿದೆಯೇ ಹಾಗೂ ರಾಜ್ಯ ಸರ್ಕಾರ ಆನಿಟ್ಟಿನಲ್ಲಿ ಕೈಗೊಂಡಿರುವ ಕ್ರಮವೇನು ? ಎಂದು ಪ್ರಶ್ನಿಸಿದರು. ಬರೀ ಪತ್ರ ವ್ಯವಹಾರದಲ್ಲಿಯೇ ಒಂದೂವರೆ ವರ್ಷಗಳು ಕಳೆದಿವೆ. ಕಳೆದ ಎರಡೂವರೆ ವರ್ಷಗಳಿಂದ ನವಲಗುಂದ ಹಾಗೂ ನರಗುಂದದಲ್ಲಿ ನಿರಂತರ ಹೋರಾಟ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಎರಡು ರಾಷ್ಟ್ರೀಯ ಜನರ ಭಾವನೆಗಳೊಂದಿಗೆ ಚೆಲ್ಲಾಟ ವಾಡುತ್ತ ಅನಗತ್ಯವಾಗಿ ಕಾಲಹರಣ ಮಾಡುತ್ತಿವೆ. ನೀರಿನ ವಿಷಯದಲ್ಲಿ ಯಾರೊಬ್ಬರು ರಾಜಕೀಯ ಮಾಡದೆ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು, ಮಹದಾಯಿ ಜಲ ವಿವಾದ ಕುರಿತಂತೆ ಪ್ರಧಾನಮಂತ್ರಿಗಳು ಮಧ್ಯಪ್ರವೇಶಿಸಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಜಲವಿವಾದವನ್ನು ಕೂಡಲೇ ಬಗೆಹರಿಸುವಂತೆ 2016ರ ಮಾರ್ಚ್ 30 ರಂದು ಕರ್ನಾಟಕ ವಿಧಾನ ಮಂಡಲವು ಅಂಗೀಕರಿಸಿದ ನಿರ್ಣಯವನ್ನು ಉಲ್ಲೇಖಿಸಿ, 2016ರ ಎಪ್ರಿಲ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದಲ್ಲದೆ, 2016ರ ಸೆಪ್ಟಂಬರ್ 1 ರಂದು ನ್ಯಾಯಾಧೀಕರಣದ ಕಲಾಪದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕಣಿವೆ ರಾಜ್ಯಗಳು ವಿವಾದವನ್ನು ಯಾವುದೇ ಮಧ್ಯಸ್ಥಿಕೆಯಿಂದ ಅಥವಾ ಮಧ್ಯಸ್ಥಿಕೆ ಇಲ್ಲದೆ ಪರಿಹರಿಸಿಕೊಳ್ಳಲು ಸಲಹೆ ನೀಡಿದ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯು 2016ರ ಡಿಸೆಂಬರ್ 1ರಂದು ಕರ್ನಾಟಕ ರಾಜ್ಯವು ಮಹದಾಯಿ ಕಣಿವೆಯಿಂದ ತಕ್ಷಣವೇ ಮಲಪ್ರಭಾ ಜಲಾಶಯಕ್ಕೆ ಯೋಜಿಸಿರುವಂತೆ, ನೀರನ್ನು ತಿರುವುಗೊಳಿಸಲು ಅನುವಾಗುವಂತೆ ಪ್ರಧಾನಮಂತ್ರಿಗಳು ಮಧ್ಯಪ್ರವೇಶಿಸಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಜಲವಿವಾದವನ್ನು ಬಗೆಹರಿಸುವಂತೆ ನಿರ್ಣಯ ಅಂಗೀಕರಿಸಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು 2017ರ ಜನವೆರಿ 18ರಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಉತ್ತರಿಸಿದರು. ಮಹದಾಯಿ, ನ್ಯಾಯಾಧೀಕರಣದ ಸೂಚನೆ ಮೇರೆಗೆ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ರಾಜಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಕೇಂದ್ರ ಹಾಗೂ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು, 2016ರ ಸೆಪ್ಟಂಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮಹದಾಯಿ ಜಲವಿವಾದವನ್ನು ಸೌಹಾರ್ದತೆಯಿಂದ ಇತ್ಯರ್ಥಗೊಳಿಸಲು ಸಹಕರಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು 2016ರ ಅಕ್ಟೋಬರ್ 21ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಎರ್ಪಡಿಸಿದ್ದರು. ಆದರೆ ಗೋವಾ ಮುಖ್ಯಮಂತ್ರಿಗಳ ಮನವಿಯ ವೆರೆಗೆ ಸಭೆಯನ್ನು ಮುಂದೂಡಲಾಯಿತು. ಆನಂತರ ಗೋವಾ ಜಲಸಂಪನ್ಮೂಲ ಸಚಿವರಿಗೆ 2017ರ ಮೇ 24ರಂದು ಪತ್ರ ಬರೆಯಲಾಗಿದ್ದು, 2017ರ ಮೇ 30ರಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು 2017ರ ಜೂನ್ನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲು ಕೋರಿದ್ದರು. ಆದರೆ ಗೋವಾ ಉಪಚುನಾವಣೆಯಲ್ಲಿ ಅಗಸ್ಟ್ ಅಂತ್ಯದವರೆಗೆ ಸೂಕ್ತವಲ್ಲ ಎಂದು ಆಗಸ್ಟ್ 3ರಂದು ಪತ್ರ ಬರೆದಿದ್ದರು. ಆನಂತರ ಮತ್ತೆ ಮಹಾರಾಷ್ಟ್ರ ಮುಖ್ಯಕಾರ್ಯದರ್ಶಿಗಳು 2017ರ ಅಕ್ಟೋಬರ್ 16ರಂದು ಸಭೆ ನಡೆಸಲು ಅನುಕೂಲವಿರುವ ದಿನಾಂಕ ತಿಳಿಸುವಂತೆ ಕೋರಿದ್ದಾರೆ ಎಂದು ಉತ್ತರಿಸಿದರು. ವಿಧಾನಸಭೆಯ ಸರ್ವಾನುಮತದ ನಿರ್ಣಯದ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆಯೇ ಹಾಗೂ ಸರ್ವ ಪಕ್ಷ ಸಭೆಯಲ್ಲಿ ಈ ಸಮಸ್ಯೆಯನ್ನು ಒಂದು ತಿಂಗಳೊಳಗೆ ಬಗೆಹರಿಸುವುದಾಗಿ ತಿಳಿಸಿರುವುದು ಸರ್ಕಾರದ ಗಮನದಲ್ಲಿದೆಯೇ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ ಅವರು, ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ಅವರು ಅದನ್ನು ನ್ಯಾಯಾಧೀಕರಣಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಲು ಕೊರಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಜಲವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಹಮತ ಅವಶ್ಯವಿದ್ದು, ಈಗಾಗಲೇ ನ್ಯಾಯಾಧೀಕರಣದಲ್ಲಿ ವಿಚಾರಣೆಹಂತದಲ್ಲಿರುವುದರಿಂದ ಮಧ್ಯಪ್ರವೇಶಿಸಿರುವುದು ಸಮಂಜಸವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ ಎಂದು ಉತ್ತರಿಸಿದರು. ಇದಲ್ಲದೆ ಕೇಂದ್ರ ಜಲಸಂಪನ್ಮೂಲ ಸಚಿವರು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಈವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮೂರು ರಾಜ್ಯಗಳ ಸಹಮತ ಅವಶ್ಯವಿದೆ ಎಂದು ಹೇಳಿದ್ದಾರೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ರಾಜ್ಯ ಸರ್ಕಾರದ ಉತ್ತರಕ್ಕೆ ತೀವ್ರ ಅಸಮಾಧಾನಗೊಂಡ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಸದನದಲ್ಲಿಯೇ ಎರಡು ರಾಷ್ಟ್ರೀಯ ಪಕ್ಷಗಳ ಉಭಯ ನಾಯಕರು ಜನರ ಭಾವನೆಗಳಿಗೆ ಗೌರವಕೊಟ್ಟು, ಉತ್ತಮವಾದ ನಿರ್ಣಯ ಕೈಗೊಳ್ಳುವ ಮೂಲಕ ಶೀಘ್ರದಲ್ಲಿಯೇ ನ್ಯಾಯಾಧೀಕರಣದ ಹೊರಗಡೆಯೇ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರು ಕೇಂದ್ರದ ಮನವೊಲಿಸುವ ಪ್ರಯತ್ನ ಮಾಡಬೇಕು. ಅಲ್ಲದೆ, ರಾಜ್ಯ ಸರ್ಕಾರ ಪದೆ ಪದೇ ಒಂದು ತಿಂಗಳ ಕಾಲಾವಕಾಶ ಎಂದು ಅನಗತ್ಯ ವಿಳಂಬ ಮಾಡದೆ ಮತ್ತೋಮ್ಮೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಲು ದಿನಾಂಕ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.