50 ಸಾವಿರ ಶಿಕ್ಷಕ-ಶಿಕ್ಷಕಿಯರಿಗೆ ವಿಶೇಷ ತರಬೇತಿ: ಎಚ್.ಎನ್. ಗೋಪಾಲಕೃಷ್ಣ
Date : 2017-11-22 SHARE
ಧಾರವಾಡ : ರಾಜ್ಯದಲ್ಲಿನ ಶಿಕ್ಷಕರ ಸಾಮಥ್ರ್ಯ ಮತ್ತು ಜ್ಞಾನದ ಅಭಿವೃದ್ಧಿಗಾಗಿ ರೂಪಿಸಲಾಗಿರುವ ‘ಗುರುಚೇತನ’ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಪ್ರಸಕ್ತ ವರ್ಷ ಸುಮಾರು 50 ಸಾವಿರ ಶಿಕ್ಷಕ-ಶಿಕ್ಷಕಿಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ರಾಜ್ಯ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಹೇಳಿದರು. ಅವರು ಬುಧವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು, ಶಿಕ್ಷಕರು ಇಚ್ಛಿಸುವ ಹಾಗೂ ಬೋಧಿಸುವ ವಿಷಯದಲ್ಲಿ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. ಗುರುಚೇತನ ತರಬೇತಿಗೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿಯೇ ಪ್ರತ್ಯೇಕ ಟೀಚರ್ಸ ಟ್ರೇನಿಂಗ್ ಮ್ಯಾನೇಜಮೆಂಟ್ ಸಿಸ್ಟಂ (ಟಿಟಿಎಂಎಸ್) ಅಭಿವೃದ್ಧಿ ಪಡಿಸಲಾಗಿದೆ ಎಂದರು. ಗುರುಚೇತನ ತರಬೇತಿಗೆ 28 ಮಾದರಿಗಳನ್ನು ರೂಪಿಸಲಾಗಿದ್ದು, ಪ್ರತಿ ಮಾದರಿಗೆ 4 ಜನ ಸಂಪನ್ಮೂಲ ವ್ಯಕ್ತಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳಿದ್ದು, ಅವರು ತರಬೇತಿಯ ಮೌಲ್ಯಮಾಪನ ವರದಿಗಳನ್ನು ನಿರಂತರವಾಗಿ ಇಲಾಖೆಯ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ ಎಂದರು. . ಇಲಾಖೆಯ ಮತ್ತೊಂದು ಮಹತ್ವದ ಕಾರ್ಯಕ್ರಮವಾದ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ (ಟಿಎಎಲ್ಪಿ)ದ ಅನುಷ್ಠಾನದಲ್ಲಿಯೂ ಡಯಟ್ ಪಾತ್ರ ಮಹತ್ವದ್ದಾಗಿದೆ. ಜಿಲ್ಲೆಯ ಪ್ರತಿ ಡಯಟ್ದಲ್ಲಿ ಟೀಚರ್ಸ ಲರ್ನಿಂಗ್ ಸೆಂಟರ್ (ಟಿಎಲ್ಸಿ) ಅಭಿವೃದ್ಧಿಪಡಿಸಲಾಗುತ್ತಿದ್ದು, ಅಲ್ಲಿ ಶಿಕ್ಷಕರು ತಮಗೆ ಅಪೇಕ್ಷಿತ ತಂತ್ರಜ್ಞಾನದ ಮಾಹಿತಿಗಾಗಿ ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದರು. ಪ್ರತಿ ಡಯಟ್ಗೆ 25 ಲಕ್ಷ ರೂ. ವಿಶೇಷ ಅನುದಾನ : ರಾಜ್ಯದಲ್ಲಿರುವ ಎಲ್ಲ ಡಯಟ್ಗಳ ಮೂಲಕ ಶಿಕ್ಷಕರ ಶಿಕ್ಷಣ ಯೋಜನೆ (ಟಿಇಪಿ) ಅನುಷ್ಠಾನಗೊಳಿಸಲಾಗಿದ್ದು, ಇದಕ್ಕಾಗಿ ರಾಜ್ಯದ ಪ್ರತಿ ಡಯಟ್ಗೆ 25 ಲಕ್ಷ ರೂ. ವಿಶೇಷ ಅನುದಾನ ಒದಗಿಸಲಾಗಿದೆ. ಪ್ರತಿಯೊಂದು ಆರ್ಥಿಕ ವರ್ಷದಲ್ಲಿ ಈ ಅನುದಾನವನ್ನು ಸಕಾಲಕ್ಕೆ ಬಳಕೆ ಮಾಡಿಕೊಳ್ಳದೆ ಹೋದರೆ ಮುಂದಿನ ಆರ್ಥಿಕ ವರ್ಷಕ್ಕೆ ಅನುದಾನ ಕೇಳಲು ಡಯಟ್ಗಳಿಗೆ ಅವಕಾಶ ವಿಲ್ಲ ಎಂದ ಗೋಪಾಲಕೃಷ್ಣ ಅವರು ರಾಜ್ಯದಲ್ಲಿ ಬಹಳ ಹಿಂದೆಯೇ ಕಿರಿಯ ಪ್ರಾಥಮಿಕ ಹಂತದಲ್ಲಿ ಡಿ.ಇಡಿ. ಇಲ್ಲವೇ ಟಿಸಿಎಚ್ ತರಬೇತಿ ಇಲ್ಲದೆ ನೇಮಕಗೊಂಡ ಶಿಕ್ಷಕ-ಶಿಕ್ಷಕಿಯರು ಈಗ ಕಡ್ಡಾಯವಾಗಿ ತರಬೇತಿ ಹೊಂದಲು ಆದೇಶಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಈ ಕುರಿತು ಡಯಟ್ ಉಸ್ತುವಾರಿಯಲ್ಲಿ ತರಬೇತಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ ಚಿತ್ರಕಲೆ, ಸಂಗೀತ, ಕ್ರಾಫ್ಟ, ಕೃಷಿ, ತೋಟಗಾರಿಕೆ ಕ್ಷೇತ್ರಗಳಿಗೆ ಅನುಗುಣವಾಗಿ ಸುಮಾರು 5500 ಶಿಕ್ಷಕ-ಶಿಕ್ಷಕಿಯರಿಗೆ ವಿಶೇಷ ತರಬೇತಿ ನೀಡಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಯೋಜಿಸಿದೆ ಎಂದರು.