ಮೊಟ್ಟೆ ಕದ್ದು ಜೈಲು ಪಾಲಾದ ಮೂವರು ಖದೀಮರು : ಧಾರವಾಡ ಗ್ರಾಮೀಣ ಪೊಲೀಸರ ಯಶಸ್ವಿ ಕಾರ್ಯಾಚರಣೆ
Date : 2017-11-22 SHARE
ಧಾರವಾಡ: ಚಿನ್ನ, ನಗ, ನಾಣ್ಯ, ಮನೆ ಹಾಗೂ ಅಂಗಡಿ ಕಳ್ಳತನ ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ಇಲ್ಲಿಯ ಮೂವರು ಖದೀಮರು ಮೊಟ್ಟೆ ಕದ್ದು ಜೈಲಿಗೆ ಸೇರಿದ ಖತರ್ನಾಕ್ ಕಥೆ ಧಾರವಾಡ ದಲ್ಲಿ ಬೆಳಕಿಗೆ ಬಂದಿದೆ. ಹೌದು! ಇದು ಅಚ್ಚರಿಯಾದರೂ ನಂಬಲೇಬೇಕಾದ ಕಳ್ಳರ ಸುದ್ದಿ. ಕೋಳಿ ಫಾರ್ಮ ನಲ್ಲಿದ್ದ ಸುಮಾರು 45 ಸಾವಿರ ಮೌಲ್ಯದ ೯೦೦೦ ಮೊಟ್ಟೆಗಳನ್ನು ಮೂವರು ಖದೀಮರು ಸೇರಿ ಕಳ್ಳತನ ಮಾಡಿ, ಇದೀಗ ಪೊಲೀಸರ ಕೈಗೆ ಸಿಕ್ಕಿದ್ದರಿಂದ ಅವರು ಕೈ ಕೋಳ ತೊಡಿಸಿ ಮಾವನ ಮನೆಗೆ ಕಳುಹಿಸಿದ್ದಾರೆ. ಇದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರ ಕೋಳಿ ಫಾರಂ ನಲ್ಲಿ ನಡೆದಿದೆ. ಅವರ ಫಾರಂನಲ್ಲಿ ಸುಮಾರು 2000 ಕೋಳಿಗಳನ್ನು ಸಾಕಾಣಿಕೆ ಮಾಡಿದ್ದಾರೆ. 9000 ಮೊಟ್ಟೆಗಳನ್ನು ಶ್ರೀನಿವಾಸಮೂರ್ತಿ ಅವರು ಫಾರಂನಲ್ಲೇ ಇಟ್ಟಿದ್ದರು. ಕಳೆದ ನವೆಂಬರ್ 15 ರಂದು ಫಾರಂಗೆ ಲಗ್ಗೆ ಇಟ್ಟ ಕಳ್ಳರು, ಮೊಟ್ಟೆಗಳನ್ನು ಯಾಮಾರಿಸಿಕೊಂಡು ಹೋಗಿದ್ದರು. ಈ ಹಿನ್ನಲೆಯಲ್ಲಿ ಶ್ರೀನಿವಾಸಮೂರ್ತಿ ಅವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸ್ ರಿಗೆ ಮೂವರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಬೆಳ್ಳಿಗಟ್ಟಿ ಗ್ರಾಮದ ಮೈಲಾರಿ ಕಲ್ಲೂರ, ಗುಡಿಹಾಳ ಗ್ರಾಮದ ಕಲ್ಲಪ್ಪ ಗುಡಿಹಾಳ ಹಾಗೂ ಬೆಂಡಿಗೇರಿ ಗ್ರಾಮದ ಶಂಕರ ಜಾಧವ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನು ಮೊಟ್ಟೆ ಸಮೇತ ಹಿಡಿದ ಪೊಲೀಸರು ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.