BREAKING NEWS(click on the news)----------
  • 941 ಕೋಟಿಯ ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಗೆ ಡಿಸೆಂಬರ್‍ನಲ್ಲಿ ಚಾಲನೆ : ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ


    Date : 2017-11-27 SHARE

    ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಹು ಮಹತ್ವಾಂಕ್ಷಿ ಯೋಜನೆಯಾದ ಮಲಪ್ರಭಾ ಜಲಾಶಯದಿಂದ ಹೊರ ಹೋಗುವ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆಯ ಆಧುನೀಕರಣ ಕಾಮಗಾರಿಗೆ ಈಗಾಗಲೇ 1120 ಕೋಟಿಗೆ ಅನುಮೋದನೆಗೊಂಡು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹರಿದು ಹೋಗುವ ಕಾಲುವೆಗಳ ಆಧುನೀಕರಣ ಕಾಮಗಾರಿಗೆ 941.80 ಕೋಟಿ ರೂಪಾಯಿಯ ಕಾಮಗಾರಿಗೆ ಡಿಸೆಂಬರ್ ಮೊದಲನೇ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಆಧುನೀಕರಣ ಕಾಮಗಾರಿಯಿಂದಾಗಿ ಮಲಪ್ರಭಾ ಬಲದಂಡೆ ಕಾಲುವೆ ಗುಂಟ ಬರುವ ಸವದತ್ತಿ, ನವಲಗುಂದ, ಹುಬ್ಬಳ್ಳಿ, ನರಗುಂದ, ಗದಗ ಹಾಗೂ ರೋಣ, ರಾಮದುರ್ಗ ಮತ್ತು ಬಾದಾಮಿ ತಾಲೂಕಿನ 500ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ರೈತರ ಬದುಕು ಹಸನು ಆಗಲಿದೆ. ಕಳೆದ 30 ವರ್ಷಗಳಿಂದ ಕಾಲುವೆ ದುರಸ್ತಿ ಕಾಣದೆ ಕೊನೆ ಅಂಚಿನ ರೈತರ ಜಮೀನುಗಳಿಗೆ ಈವರೆಗೆ ಸಮರ್ಪಕವಾಗಿ ನೀರು ತಲುಪುತ್ತಿರಲ್ಲಿಲ್ಲ. ಕಾಲುವೆ ಆಧುನೀಕರಣಗೊಂಡರೆ ಶೇ 38ರಷ್ಟು ನೀರು ಪೋಲಾಗುವುದು ತಡೆಗಟ್ಟಬಹುದಾಗಿದೆ. ಇದಲ್ಲದೆ, ಹೊಳೆ ಮತ್ತು ಹಳ್ಳಗಳಿಗೂ ಸಮರ್ಪಕ ನೀರು ಹರಿಯಲಿದೆ. ಇದರಿಂದಾಗಿ ಕೊನೆ ಅಂಚಿನ ಹಳ್ಳಿಗಳ ರೈತರ ಜಮೀನಿಗೂ ನೀರು ತಲುಪಲಿದೆ ಎಂದು ಹೇಳಿದರು. ಈ ಕಾಮಗಾರಿಯಿಂದ ವಿಶೇಷವಾಗಿ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನಲ್ಲಿ ಮಲಪ್ರಭಾ ಬಲದಂಡೆ ಮುಖ್ಯ ಕಾಲುವೆ ಕಿ.ಮೀ 15ರಿಂದ 104 ರವರೆಗೆ ಬಂದರೆ, ಉಪ ಕಾಲುವೆಗಳು 2 ರಿಂದ 56ರವರೆಗೆ ಬರಲಿವೆ. ಹುಬ್ಬಳ್ಳಿ ತಾಲೂಕಿನ ಬಹು ದಿನಗಳ ಬೇಡಿಕೆಯಾದ ಮಂಟೂರ ಉಪಕಾಲುವೆ ಕೂಡ ಇದರಲ್ಲಿ ಒಳಗೊಂಡಿದೆ. ಈ ಉಪ ಕಾಲುವೆಯ ಆಧುನೀಕರಣದಿಂದಾಗಿ ಬಂಡಿವಾಡ, ಮಂಟೂರ, ನಾಗರಳ್ಳಿ, ಇಂಗಳಹಳ್ಳಿ, ಶಿರಗುಪ್ಪಿ ಗ್ರಾಮಗಳ ರೈತರಿಗೆ ನೀರು ಸುಲಭವಾಗಿ ದೊರೆಯಲಿದೆ ಎಂದರು. ಮಲಪ್ರಭಾ ಬಲದಂಡೆ ಕಾಲುವೆ ಆಧುನಿಕರಣಕ್ಕೆ ರಾಜ್ಯ ಸರ್ಕಾರ 2015-16ರ ಬಜೆಟ್‍ನಲ್ಲಿ 962 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಆದರೆ ಅದು ಈವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಸದನದ ಒಳಗೆ ಹಾಗೂ ಹೊರಗೆ ಸತತ ಹೋರಾಟ ನಡೆಸಿ, ಯಶಸ್ಸು ಕಂಡಿದ್ದೇವೆ. ಇದಕ್ಕಾಗಿ ಕಳೆದ ವರ್ಷ 2016ರ ಸೆಪ್ಟಂಬರ್ 9ರಿಂದ 11ರವರೆಗೆ ಮೂರು ದಿನಗಳ ಕಾಲ ಮಲಪ್ರಭಾ ಬಲದಂಡೆ ಕಾಲುವೆಗುಂಟ ನವಲಗುಂದ ತಾಲೂಕಿನ ಶಿರೂರ ಗ್ರಾಮದಿಂದ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯವರೆಗೆ ಸುಮಾರು 36 ಕಿಲೋ ಮೀಟರ್ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ, ಕಾಲುವೆಯ ಮೇಲೆಯೇ ವಾಸ್ತವ್ಯ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರನ್ನು ಹಲವು ಬಾರಿ ಖುದ್ದಾಗಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಇದಕ್ಕೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಜೂನ್ 6ರಂದು ಬೆಂಗಳೂರಿನಲ್ಲಿ ನಡೆದ ವಿಧಾನ ಸಭೆಯ ಅಧಿವೇಶನದಲ್ಲಿ ಸದನದ ಬಾವಿಗಿಳಿದು ಈ ಯೋಜನೆ ಜಾರಿಗಾಗಿ ಧರಣಿ ನಡೆಸಿದಾಗ ಜಲಸಂಪನ್ಮೂಲ ಸಚಿವರು ಸದನಕ್ಕೆ ಲಿಖಿತ ಭರವಸೆ ನೀಡಿದ್ದರಿಂದ ಇದೀಗ ಕಾಮಗಾರಿ ಆರಂಭಗೊಳ್ಳುತ್ತಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.