BREAKING NEWS(click on the news)----------
  • ನವಲಗುಂದ ವಿಧಾನ ಸಭಾ ಕ್ಷೇತ್ರದ ಸುಳ್ಳ, ಅಣ್ಣಿಗೇರಿಯಲ್ಲಿ ರಸ್ತೆ ಕಾಮಗಾರಿಗೆ ನವೆಂಬರ್ 29ರಂದು ಭೂಮಿಪೂಜೆ : ಶಾಸಕ ಎನ್.ಹೆಚ್. ಕೋನರಡ್ಡಿ


    Date : 2017-11-27 SHARE

    ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ತಾಲೂಕಿನ ಸುಳ್ಳ ಹಾಗೂ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಸಿಆರ್‍ಎಫ್ ಅನುದಾನದಲ್ಲಿ ರಸ್ತೆ ಕಾಮಗಾರಿಗೆ 12 ಕೋಟಿ ಮಂಜೂರಾಗಿದೆ. ಅದರ ಭೂಮಿಪೂಜೆಯನ್ನು ನವೆಂಬರ್ 29ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಸುಳ್ಳ ಗ್ರಾಮದಲ್ಲಿ ಹಾಗೂ 12 ಗಂಟೆಗೆ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ತಾಲೂಕಿನ ಸುಳ್ಳದಿಂದ ಹುಬ್ಬಳ್ಳಿಯ ಕೇಶ್ವಾಪೂರ ರಸ್ತೆ ಸಂಪೂರ್ಣ ಹಾಳಾಗಿತ್ತು. ಅದರ ಅಭಿವೃದ್ಧಿ ಕಾಮಗಾರಿಗೆ 7 ಕೋಟಿ ಅನುದಾನ, ಅದೇ ರೀತಿ ನವಲಗುಂದ ತಾಲೂಕಿನ ಅಣ್ಣಿಗೇರಿ ನಗರದಲ್ಲಿರುವ ಅಂಬಿಗೇರಿ ಕ್ರಾಸ್‍ದಿಂದ ನವಲಗುಂದ ರಸ್ತೆಯ ರೇಲ್ವೆ ಗೇಟ್‍ವರೆಗೆ ದ್ವಿಪಥ ರಸ್ತೆ ನಿರ್ಮಿಸಲು 5 ಕೋಟಿ ಹಂಚಿಕೆಯಾಗಿದೆ. ಈ ಎರಡು ರಸ್ತೆಗಳ ಕಾಮಗಾರಿಯ ಭೂಮಿ ಪೂಜೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿಯವರು ನೆರವೇರಿಸಲಿದ್ದಾರೆ. ಇದರ ಅಧ್ಯಕ್ಷತೆಯನ್ನು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ವಹಿಸಿವರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ರಸ್ತೆ ಕಾಮಗಾರಿಗಳಿಗೆ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಿದ್ದು, ಅವರ ಮನವಿಗೆ ಸ್ಪಂದಿಸಿ, ಯೋಜನೆಗಳಿಗೆ ಆದ್ಯತೆ ಮೇಲೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅವುಗಳಿಗೆ ಸಿಆರ್‍ಎಫ್ ಯೋಜನೆಯಲ್ಲಿ ಅನುಮೋದನೆ ದೊರೆತಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.