BREAKING NEWS(click on the news)----------
  • ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಗುಂಡಿಗೆ ಬಲಿಯಾದ ವೀರಯೋಧ ಮಂಜುನಾಥ ಜಕ್ಕನವರ್ ಅಂತ್ಯಕ್ರಿಯೆ


    Date : 2017-11-29 SHARE

    ಧಾರವಾಡ: ಮಹಾರಾಷ್ಟ್ರದ ಗಡಚಿರೋಳಿ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಗುಂಡಿಗೆ ಬಲಿಯಾದ ತಾಲ್ಲೂಕಿನ ಮನಗುಂಡಿ ಗ್ರಾಮದ ವೀರಯೋಧ ಮಂಜುನಾಥ ಶಿವಲಿಂಗಪ್ಪ ಜಕ್ಕನವರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ ಹುಟ್ಟೂರು ಮನಗುಂಡಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಿತು. ನ.26ರ ಸಂಜೆ ನಕ್ಸಲರ ಗುಂಡಿಗೆ ಬಲಿಯಾದ ಹುತಾತ್ಮ ಮಂಜುನಾಥ ಜಕ್ಕನವರ್ ಅವರ ಪಾರ್ಥಿವ ಶರೀರವನ್ನು ನಗರಕ್ಕೆ ತರಲಾಯಿತು. ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಂಡು, ಪುಷ್ಪನಮನ ಸಲ್ಲಿಸಿದರು. ಅಲ್ಲಿ ಕೆಲಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಮಾರ್ಗ ಮಧ್ಯದ ಪ್ರದೇಶಗಳಲ್ಲಿ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಯಿತು. ಸಹಸ್ರಾರು ಜನರ ಜಯಘೋಷಗಳ ನಡುವೆ ಮಧ್ಯಾಹ್ನ ಮನಗುಂಡಿಗೆ ಆಗಮಿಸಿದ ವೀರಯೋಧನ ಕಳೆಬರವನ್ನು ಆತನ ಮನೆಯಲ್ಲಿ ಕೆಲಕಾಲ ಇರಿಸಿ, ಸಂಪ್ರದಾಯ ಪ್ರಕಾರ ತಂದೆ ಶಿವಲಿಂಗಪ್ಪ , ತಾಯಿ ರತ್ನವ್ವ, ಪತ್ನಿ ಲಲಿತಾ, ಮೂರೂವರೆ ವರ್ಷದ ಮಗ ಗಣೇಶ, ಎರಡು ವರ್ಷದ ಮಗಳು ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು ಅಪಾರ ದುಖಃ, ಆಕ್ರಂದನಗಳ ಮಧ್ಯೆ ಪೂಜೆ ಸಲ್ಲಿಸಿದರು. ನೆರೆದಿದ್ದ ಜನಸ್ತೋಮದ ಕಣ್ಣಾಲಿಗಳು ತುಂಬಿ ಬಂದವು. ಸಚಿವ ಸಂತೋಷ ಲಾಡ್, ಸಂಸದ ಪ್ರಹ್ಲಾದ್ ಜೋಶಿ ಅಂತಿಮ ದರ್ಶನ : ಸ್ಥಳೀಯ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದ ಪ್ರಹ್ಲಾದ್ ಜೋಶಿ ಅವರು ವೀರಯೋಧ ಮಂಜುನಾಥ ಜಕ್ಕನವರ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸಚಿವ ಸಂತೋಷ ಲಾಡ್ ಅವರು ಮೃತ ಯೋಧನ ತಂದೆ ಶಿವಲಿಂಗಪ್ಪ ಅವರನ್ನು ಸಂತೈಸುತ್ತಾ ಗ್ರಾಮದ ಶಾಲಾ ಆವರಣದವರೆಗೆ ಕರೆದುಕೊಂಡು ಬಂದರು. ಶಾಲಾ ಆವರಣದಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದ ಅವರು, ಮನಗುಂಡಿಯಲ್ಲಿ ಹುಟ್ಟಿ ಬೆಳೆದ ಮಂಜುನಾಥ ಜಕ್ಕನವರ್ ಅವರು ಹುತಾತ್ಮರಾಗಿದ್ದಾರೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ. ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಲಾಗುವುದು. ವೈಯಕ್ತಿಕ ಸಹಾಯ ನೀಡಲೂ ಸಹ ಸಿದ್ಧವಾಗಿದ್ದೇನೆ. ವೀರ ಸೈನಿಕನ ಅಗಲಿಕೆ ದೇಶಕ್ಕಾದ ನಷ್ಟವಾಗಿದೆ ಎಂದರು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಸಿಆರ್‍ಪಿಎಫ್ ಯೋಧರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು. ವಿಧಿವಿಧಾನಗಳ ಪ್ರಕಾರ ವೀರಯೋಧನ ಅಂತ್ಯಕ್ರಿಯೆ ಜರುಗಿತು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಸಿಆರ್‍ಪಿಎಫ್ ಡಿಐಜಿ ಬಿ.ಎಸ್.ಗುಜ್ರಾಲ್, ಕೋಬ್ರಾ ಪಡೆಯ ಕಮಾಂಡೊ ವಸಂತ ಥಾಪಾ, ಜಿ.ಪಂ.ಸದಸ್ಯ ನಿಂಗಪ್ಪ ಘಾಟಿನ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ತಹಶೀಲ್ದಾರ ಪ್ರಕಾಶ ಕುದರಿ, ತಾ.ಪಂ. ಇಓ ರುದ್ರಸ್ವಾಮಿ ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಗ್ರಾಮಸ್ಥರು, ಸಹಸ್ರಾರು ಯುವಜನ, ವಿದ್ಯಾರ್ಥಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.