ರೈತನ ಸಾಲದ ಮೇಲೆ ಬೆಳಕು ಚೆಲ್ಲುವ ಅಂಡರ್ ದ ಮ್ಯಾಂಗೋ ಟ್ರೀ ಇಂಗ್ಲೀಷ್ ಕಾದಂಬರಿ ಬಿಡುಗಡೆ
Date : 2017-11-22 SHARE
ಧಾರವಾಡ: ಕೃಷಿಕ ಕಲ್ಲಪ್ಪನ ಸಾಲ ಮತ್ತು ಮಾವಿನ ಹಣ್ಣಿನ ಗಿಡ ಕುರಿತ ನೈಜ ಸಂಗತಿಗಳು ಒಳಗೊಂಡಿರುವ ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ರೈತನೊಬ್ಬ ಅನುಭವಿಸುವ ಸಾಲದ ಮೇಲಿನ ತಲ್ಲಣಗಳನ್ನು ಅನಾವರಣಗೊಳಿಸುವ ಪ್ರೊ. ಮಲ್ಲಿಕಾರ್ಜುನ ಪಾಟೀಲರ ‘ಅಂಡರ ದ ಮ್ಯಾಂಗೋ ಟ್ರೀ’ ಇಂಗ್ಲೀಷ್ ಕಾದಂಬರಿಯನ್ನು ಕುಲಪತಿ ಪ್ರೊ. ಪ್ರಮೋದ ಗಾಯಿ ಬಿಡುಗಡೆಗೊಳಿಸಿದರು, ಬುಧವಾರ ವಿಶ್ವವಿದ್ಯಾಲಯದ ಮಾನಸೊಲ್ಲಾಸ ಸಭಾಭವನದಲ್ಲಿ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಹಾಗೂ ಹುಬ್ಬಳ್ಳಿ ಸಪ್ನಾ ಬುಕ್ ಸ್ಟಾಲ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ. ಪ್ರಮೋದ ಗಾಯಿ, ವಿದ್ಯಾರ್ಥಿಗಳು ಸ್ವಂತ ಬರವಣಿಗೆ ಆರಂಭಿಸುವ ಮೂಲಕ ತಮ್ಮನ್ನು ತಾವು ಅರಿತುಕೊಳ್ಳಬೇಕು. ಬರವಣಿಗೆಯಿಂದ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ಧಾರವಾಡ ಕನ್ನಡದ ಹಿರಿಯ ಸಾಹಿತಿಗಳ ತವರೂರಾಗಿದ್ದು. ಎರಡು ಭಾಷೆಗಳನ್ನು ಕಲಿಯುವುದರಿಂದ ತುಲನಾತ್ಮಕ ಅಧ್ಯಯನ ಹಾಗೂ ಬರವಣಿಗೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಮೊದಲನೆ ಪ್ರಯತ್ನದಲ್ಲಿಯೇ ಐ.ಎ.ಎಸ್ ಪ್ರಿಲಿಮಿನರಿ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿನಿ ಬಸಮ್ಮ ಹಳ್ಳಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಲೇಖಕ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮಲ್ಲಿಕಾರ್ಜುನ ಪಾಟೀಲ, ಪ್ರೊ. ಕೆ.ಎಸ್. ಶರ್ಮಾ, ಪ್ರೊ. ಕೆ. ಮುನವಳ್ಳಿ, ಪ್ರೊ. ಮೋಹನ ಸಿದ್ಧಾಂತಿ, ಹುಬ್ಬಳ್ಳಿ ಸ್ವಪ್ನಾ ಬುಕ್ ಹೌಸ್ ಮುಖ್ಯಸ್ಥ ರಘು ಎಂ.ವಿ, ಪತ್ರಕರ್ತ ಉಮೇಶ ಅವ್ವಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.