BREAKING NEWS(click on the news)----------
  • ಮತ್ತೇ ಚುರುಕುಗೊಂಡ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಕರ್ನಾಟಕ ರೈತ ಸೇನಾ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್


    Date : 2017-11-30 SHARE

    ಧಾರವಾಡ : ಕಳೆದ ಎರಡೂವರೆ ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಮತ್ತೇ ಈಗ ಚುರುಕುಗೊಂಡಿದೆ. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಹದಿಮೂರು ತಾಲೂಕಿನ ಲಕ್ಷಾಂತರ ಜನರ ಏಕೈಕ ಆಶಾಕಿರಣವಾಗಿರುವ ಮಹಾದಾಯಿ ನದಿಗೆ ಕಳಸಾ-ಬಂಡೂರಿ ಕಾಲುವೆ ಜೋಡಣೆಯ ಹೋರಾಟ ಮೂರು ದಶಕಗಳಿಂದ ನಡೆದಿದೆ. ಆದರೆ ಅದು ಈಗ ತೀವ್ರತೆ ಪಡೆದುಕೊಂಡು, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಜನರು ಬಂಡಾಯವೇಳುವ ಹಂತಕ್ಕೆ ಬಂದು ತಲುಪಿದೆ. ಕರ್ನಾಟಕ ರೈತ ಸೇನಾ ವತಿಯಿಂದ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಬುಧವಾರ ನೂರಾರು ರೈತರು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಳಿಗ್ಗೆ ವಿವಿಧ ತಾಲೂಕುಗಳಿಂದ ಬಂದಿದ್ದ ರೈತರು, ಮಹಿಳೆಯರು ಪಟ್ಟಣದಲ್ಲಿ ಹಾದು ಹೋಗಿರುವ ಹುಬ್ಬಳ್ಳಿ-ವಿಜಯವಪುರ ರಾಷ್ಟ್ರೀಯ ಹೆ್ದ್ದಾರಿ ಬಂದ್ ಮಾಡಿ ಎರಡು ಗಂಟೆಗಳ ಕಾಲ ಧರಣಿ ನಡೆಸಿದರು. ಇದರಿಂದಾಗಿ ಪಟ್ಟಣದಲ್ಲಿ ಕೆಲ ಕಾಲ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ತಬ್ದಗೊಂಡಿತ್ತು. ಆನಂತರ ನಡೆದ ರೈತರ ಸಮಾವೇಶ ದಲ್ಲಿ ಮಾತನಾಡಿದ ರೈತ ಸೇನಾದ ಅಧ್ಯಕ್ಷ ವೀರೇಶ ಸೊಬರದಮಠ, ಇಂದಿಗೆ ಈ ಹೋರಾಟ ಆರಂಭಗೊಂಡು 868 ದಿನಗಳು ಕಳೆದಿವೆ. ಬಿಜೆಪಿ ಮುಖಂಡ ಯಡಿಯೂರಪ್ಪ ಡಿಸೆಂಬರ್ 15 ರೊಳಗೆ ಯೋಜನೆ ಜಾರಿ ಮಾಡೋ ಬಗ್ಗೆ ಗೋವಾದಿಂದ ರಾಜಿ ಪತ್ರ ತಂದುಕೊಡುತ್ತೇನೆ ಅಂತಾ ಹೇಳಿದ್ದಾರೆ. ಹೀಗಾಗಿ ಇನ್ನೂ ಎರಡು ವಾರ ಕಾಯಲಾಗುವುದು. ಒಂದು ವೇಳೆ ಅಂದುಕೊಂಡಂತೆ ಬಿ.ಎಸ್.ವೈ. ಅವರು ನಡೆದುಕೊಳ್ಳದಿದ್ದರೆ ಬಿಜೆಪಿ ಕಚೇರಿ ಮುಂದೆ ಹೋಗಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದರು. ರೈತ ಸೇನಾ ಪ್ರಧಾನ ಕಾರ್ಯದರ್ಶಿ ಶಂಕರ ಅಂಬಲಿ ಮಾತನಾಡಿ, ಮಹಾದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಧಾರವಾಡ, ಗದಗ್, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ನಿರಂತರವಾಗಿ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. ರೈತ ಸೇನಾ ಕಾರ್ಯಕರ್ತರು ನಿತ್ಯವೂ ಹಲವಾರು ಗ್ರಾಮಗಳಲ್ಲಿ ತಿರುಗಾಡಿ ರೈತರಿಗೆ ಹಾಗೂ ಜನರಿಗೆ ಮಹಾದಾಯಿ ನೀರು ಹಾಗೂ ಈ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.