ರಾಜೀವ ದೀಕ್ಷಿತರ ಸ್ವರ್ಣ ಜಯಂತ್ಯುತ್ಸವದ ಅಂಗವಾಗಿ ಡಿಸೆಂಬರ್ 2 ಮತ್ತು 3ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಸ್ವದೇಶಿ ಸಮ್ಮೇಳನ
Date : 2017-11-29 SHARE
ಧಾರವಾಡ: ಸ್ವದೇಶಿ ಹರಿಕಾರ ರಾಜೀವ ದೀಕ್ಷಿತರ ಸ್ವರ್ಣ ಜಯಂತ್ಯುತ್ಸವದ ಅಂಗವಾಗಿ ಡಿಸೆಂಬರ್ 2 ಮತ್ತು 3ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯಮಟ್ಟದ ಸ್ವದೇಶಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟಿನ ಜಿಲ್ಲಾ ಪ್ರಭಾರಿ ಎಮ್.ಡಿ.ಪಾಟೀಲ ತಿಳಿಸಿದ್ದಾರೆ. ಈ ಎರಡು ದಿನಗಳ ಸಮ್ಮೇಳನ ರಾಜೀವ ದೀಕ್ಷಿತ ವಿಚಾರ ವೇದಿಕೆ ಧಾರವಾಡ ಘಟಕ, ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ನಗರದ ವಿವಿಧ ಶಾಲಾ ಕಾಲೇಜುಗಳು ಮತ್ತು ಸ್ವದೇಶಿ ಪ್ರಿಯರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ, ನ.30ರಂದು ಬೆಳಗ್ಗೆ 9.30ಗಂಟೆಗೆ ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಿದಂದ ಸ್ವದೇಶಿ ದಿವಸದ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸಲು ಸ್ವದೇಶಿ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು ಚಾಲನೆ ನೀಡುವರು. ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಅಧ್ಯಕ್ಷರಾದ ಪ್ರೊ. ಕೆ. ಎಸ್. ಬಸ್ಮೆ ಉಪಸ್ಥಿತರಿರುವರು. ಈ ಜಾಥಾದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ವದೇಶಿ ಉತ್ಪನ್ನಗಳ ಸಂಸ್ಥೆಯವರು ಹಾಗೂ ಎಲ್ಲ ಸ್ವದೇಶಿ ಪ್ರಿಯರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಮ್.ಡಿ.ಪಾಟೀಲ ಅವರು ತಿಳಿಸಿದ್ದಾರೆ. ಡಿಸೆಂಬರ್ 2 ಹಾಗೂ 3ರಂದು ವಿದ್ಯಾವರ್ಧಕ ಸಂಘದಲ್ಲಿ ನಡೆಯುವ 2ದಿನಗಳ ರಾಜ್ಯ ಮಟ್ಟದ ಸ್ವದೇಶಿ ಸಮ್ಮೇಳನದ ಸಾನ್ನಿಧ್ಯವನ್ನು ಧಾರವಾಡ ಮುರುಘಾಮಟದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ರಂಗಕರ್ಮಿ ಹಾಗೂ ಚಿಂತಕರಾದ ಪ್ರಸನ್ನ ಹೆಗ್ಗೋಡ ಅವರು ಉದ್ಘಾಟಿಸಲಿರುವರು. ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕರಾದ ಎಸ್. ಆರ್. ಹಿರೇಮಠ ಅಧ್ಯಕ್ಷತೆ ವಹಿಸಲಿರುವರು. ಸಮ್ಮೇಳನದ ಅಂಗವಾಗಿ ಮೊದಲ ದಿನ ಮೂರು ಹಾಗೂ ಎರಡನೇ ದಿವಸ ಮೂರು ಸೇರಿದಂತೆ ಒಟ್ಟು ಆರು ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. "ಪ್ರಸ್ತುತ ವ್ಯವಸ್ಥೆಯಲ್ಲಿ ಗ್ರಾಹಕರ ಚಳುವಳಿ ಏಕೆ ಮತ್ತು ಹೇಗೆ?" ವಿಷಯದ ಮೇಲೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಶಾನುಭಾಗ ಅವರು ಉಪನ್ಯಾಸ ನೀಡಲಿದ್ದಾರೆ. "ಗೋವು ಆಧಾರಿತ ದೇಶಿ ಕೃಷಿ ಮತ್ತು ಗೋ ಕ್ರಾಂತಿ- ದೇಶದ ಉನ್ನತಿ" 2ನೇ ವಿಚಾರ ಸಂಕಿರಣದ ಸಾನ್ನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜರು ವಹಿಸುವರು. ಚಿಕ್ಕಮಗಳೂರಿನ ಮೂದ್ತಿಹಳ್ಳಿಯ ನೈಸರ್ಗಿಕ ಕೃಷಿಕರಾದ ಚಂದ್ರಶೇಖರ ನಾಗಣಾಪೂರ ಉಪನ್ಯಾಸ ನೀಡುವರು. "ಗಾಂಧೀ ತತ್ವಜ್ನಾನ, ಜೆ.ಸಿ.ಕುಮಾರಪ್ಪ ಶಾಶ್ವತ ಆರ್ಥಿಕತೆ ಮತ್ತು ಪ್ರಸ್ತುತತೆ" 3ನೇ ವಿಚಾರ ಸಂಕಿರಣದಲ್ಲಿ ಮಹಾರಾಷ್ಟ್ರ ಸೇವಾ ಗ್ರಾಮದ ನಯಿತಾಲಿಮ್ ಪರಿಷದ್ ಪ್ರಾಚಾರ್ಯರಾದ ಶಿವದತ್ತ ಮಿಶ್ರಾ ಅವರು ಉಪನ್ಯಾಸ ನೀಡುವರು. ಡಿಸೆಂಬರ್ 3ರಂದು ಬೆಳಗ್ಗೆ 9.30 ಗಂಟೆಗೆ ನಡೆಯಲಿರುವ "ಪ್ರಸ್ತುತ ಶಿಕ್ಷಣದ ಲೋಪ ದೋಷಗಳು ಮತ್ತು ಗುರುಕುಲ ಶಿಕ್ಷಣದಲ್ಲಿ ಅವುಗಳಿಗಿರುವ ಪರಿಹಾರೋಪಾಯಗಳು" ವಿಷಯದ ಮೊದಲನೇ ಗೋಷ್ಠಿಯ ಸಾನ್ನಿಧ್ಯವನ್ನು ಭೈರನಹಟ್ಟಿ ವಿರಕ್ತಮಠದ ಶ್ರೀ ಶಾಂತಲಿಂಗ ದೊರೆಸ್ವಾಮಿಗಳು ವಹಿಸುವರು. ಗುಜರಾತ್ ರಾಜ್ಯದ ರಾಜಕೋಟಿನ ಶಿಕ್ಷಣ ತಜ್ನರಾದ ಆಚಾರ್ಯ ಶ್ರೀ ಮೇಹುಲಜೀ ಉಪನ್ಯಾಸ ನೀಡುವರು. "ಗೃಹ ಶಿಕ್ಷಣ ಮತ್ತು ಅಡುಗೆಮನೆಯಲ್ಲಿ ರಸಾಯನಶಾಸ್ತ್ರ ಮತ್ತು ಆಯುರ್ವೇದ ಜೀವನ ಪದ್ಧತಿ" ಎರಡನೇ ವಿಚಾರ ಸಂಕಿರಣದ ಸಾನ್ನಿಧ್ಯವನ್ನು ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು ವಹಿಸುವರು. ಗುಜರಾತ್ ರಾಜ್ಯದ ರಾಜಕೋಟಿನ ಸುಶ್ರೀ ಜಿಜ್ನಾಸಬೇಹನ್ ಮೇಹುಲಜೀ ಮತ್ತು ಬೆಳಗಾವಿಯ ಆಯುರ್ವೇದ ತಜ್ನರಾದ ಡಾ ವೈಷ್ಣವಿ ಕಾಥವಟೆ ಉಪನ್ಯಾಸ ನೀಡುವರು. "ಭಾರತೀಯತೆ ಮತ್ತು ಸ್ವದೇಶಿ" ಮೂರನೇ ವಿಚಾರ ಸಂಕಿರಣದಲ್ಲಿ ಜೈಪುರಿನ ಪ್ರಿಸ್ಮ್ ಸಂಸ್ಥೆಯ ಅಧ್ಯಕ್ಷರಾದ ದೇವ್ನಂದನ್ ಉಪನ್ಯಾಸ ನೀಡಲಿರುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ- ಶಾಂತಿ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಶಿವಾನಂದ ಶೆಟ್ಟರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಚಾಲಕ ಎಮ್.ಡಿ. ಪಾಟೀಲ ತಿಳಿಸಿದ್ದಾರೆ.