ಈದಮಿಲಾದ್ ನಿಮಿತ್ತ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ರೋಗಿಗಳಿಗೆ ಶಾಲು, ಹಣ್ಣು, ಮಕ್ಕಳಿಗೆ ಬಟ್ಟೆ ವಿತರಣಾ ಕಾರ್ಯಕ್ರಮ
Date : 2017-12-02 SHARE
ಧಾರವಾಡ: ಹಬ್ಬಗಳಿಗೆ ವ್ಯಯಿಸುವ ಹಣವನ್ನು ಬಡವರು, ನಿರ್ಗತಿಕರಿಗೆ, ಅಸಹಾಯಕರಿಗೆ ನೀಡುವ ಔದಾರ್ಯ ಬೆಳೆಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕರೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಈದಮಿಲಾದ್ ನಿಮಿತ್ತ ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ರೋಗಿಗಳಿಗೆ ಶಾಲು, ಹಣ್ಣು, ಮಕ್ಕಳಿಗೆ ಬಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂ, ಇಸ್ಲಾಂ ಸೇರಿದಂತೆ ಯಾವುದೆ ಧರ್ಮಗಳಲ್ಲಿ ಅಡಂಬರಗಳಿಗೆ ಅವಕಾಶವಿಲ್ಲ. ಆದರೆ ಇತ್ತೀಚಿಗೆ ಹಬ್ಬದ ದಿನಗಳಲ್ಲಿ ಡಿಜೆ ಹಚ್ಚುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಹಬ್ಬದ ಮೌಲ್ಯ, ಸಂಭ್ರಮಗಳು ಕಾಣೆಯಾಗುತ್ತಿವೆ. ಹಬ್ಬಗಳ ಆಚರಣೆಗೆ ಖರ್ಚು ಮಾಡುವ ಹಣವನ್ನೇ ಸಮಾಜದಲ್ಲಿನ ಬಡವರು, ನಿರ್ಗತಿಕರು, ರೋಗಿಗಳಿಗೆ ನೀಡುವತ್ತ ಎಲ್ಲರೂ ಗಮನಹರಿಸಬೇಕಿದೆ. ಈ ದಿಸೆಯಲ್ಲಿ ಅಂಜುಮನ್ ಸಂಸ್ಥೆಯು ಈದಮಿಲಾದ್ ಸಂದರ್ಭದಲ್ಲಿ ರೋಗಿಗಳಿಗೆ ಶಾಲು, ಹಣ್ಣು, ಮಕ್ಕಳಿಗೆ ಬಟ್ಟೆ ವಿತರಿಸುವ ಮೂಲಕ ಮಾದರಿಯಾಗಿದೆ ಎಂದರು. ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿ, ಶಾಂತಿ, ಸಮಾನತೆ, ಸಹೋದರತ್ವ ಬೋಧಿಸಿದ ಪ್ರವಾದಿ ಮೊಹಮ್ಮದ ಪೈಗಂಬರರ ಮಾಗದರ್ಶನದಲ್ಲಿ ನಾವೆಲ್ಲ ಸಾಗಬೇಕಿದೆ. ಈ ಮೂಲಕ ಸಮಾಜದಲ್ಲಿನ ಎಲ್ಲರೂ ಸೌಹಾರ್ದತೆಯಿಂದ ಬಾಳುವ ಮುಖಾಂತರ ದೇಶದ ಐಕ್ಯತೆಯನ್ನು ಎತ್ತಿ ಹಿಡಿಯಬೇಕಿದೆ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಗಿರಿಧರ ಕುಕನೂರ, ಅಂಜುಮನ್ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಂ.ದಾಸನಕೊಪ್ಪ, ಕಾರ್ಯದರ್ಶಿ ನಜೀರಅಹ್ಮದ ಮನಿಯಾರ, ಸ.ಕಾ. ರಫೀಕಅಹ್ಮದ ಶಿರಹಟ್ಟಿ, ಇಕ್ಬಾಲ್ ಜಮಾದಾರ, ಮುನ್ನಾ ಕೆಲಗೇರಿ, ನವೀನ ಸುಬೇದಾರ, ಚೌಧರಿ ಖಾಜಾ, ಸಂಜು ಕದಂ, ಇರ್ಷಾದ ಮುಲ್ಲಾ, ರುದ್ರಯ್ಯ ಚಿಕ್ಕಮಠ, ಸಹಾಯವಾಣಿಯ ಕಿರಣ ಕುಲಕರ್ಣಿ, ವೈದ್ಯರು, ಅಧಿಕಾರಿಗಳು, ಅಂಜುಮನ್ ಇಸ್ಲಾಂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.