BREAKING NEWS(click on the news)----------
  • ನವಲಗುಂದ ವಿಧಾನ ಸಭಾ ಕ್ಷೇತ್ರದ ಮೂರು ರಸ್ತೆಗಳಿಗೆ ಶೀಘ್ರದಲ್ಲಿಯೇ ಅನುದಾನ : ಸಂಸದ ಪ್ರಹ್ಲಾದ ಜೋಶಿ ಭರವಸೆ


    Date : 2017-12-01 SHARE

    ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ಅನೇಕ ರಸ್ತೆ ಕಾಮಗಾರಿಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಸಿಆರ್‍ಎಫ್‍ನಲ್ಲಿ ಅವುಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಶಾಸಕ ಕೋನರಡ್ಡಿ ಅವರ ಎಲ್ಲ ಪ್ರಸ್ತಾವನೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗಿದೆ. ಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ನವಲಗುಂದ ವಿಧಾನ ಸಭಾ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಹೇಳಿದರು. ಅವರು ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಸಿಆರ್‍ಎಫ್ ಅನುದಾನದಲ್ಲಿ 7 ಕೋಟಿಯ ಸುಳ್ಳ-ಕೇಶ್ವಾಪೂರ ಹುಬ್ಬಳ್ಳಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಾತನಾಡಿ, ಬಹಳ ದಿನಗಳಿಂದ ಉಸುಕಿನ ಲಾರಿ ಓಡಾಡಿ ಸುಳ್ಳ-ಕೇಶ್ವಾಪೂರ ಹುಬ್ಬಳ್ಳಿ ರಸ್ತೆ ಸಂಪೂರ್ಣ ಹಾಳಾಗಿ ಸಾರ್ವಜನಿಕರಿಗೆ ಸಂಚರಿಸಲು ದುಸ್ತರವಾಗಿತ್ತು. ಈ ಹಿನ್ನಲೆಯಲ್ಲಿ ಸಿಆರ್‍ಎಫ್ ಅನುದಾನದಲ್ಲಿ 7 ಕೋಟಿ ವೆಚ್ಚದಲ್ಲಿ ಸುಳ್ಳ-ಕೇಶ್ವಾಪೂರ ಹುಬ್ಬಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಈಗಾಗಲೇ ಧಾರವಾಡ ಮುಖ್ಯರಸ್ತೆಯಿಂದ ಸುಳ್ಳವರೆಗೆ ದ್ವಿಪಥ ರಸ್ತೆ ನಿರ್ಮಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಬರುವ ದಿನಗಳಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ರಾಷ್ಟ್ರೀಯ ಹೆದ್ದಾರಿಯಿಂದ ಬ್ಯಾಹಟ್ಟಿ ಅಳಗವಾಡಿ ಮಾರ್ಗವಾಗಿ ನರಗುಂದ ವರೆಗೆ, ನವಲಗುಂದದಿಂದ ನಲವಡಿವರೆಗೆ ಹಾಗೂ ಶಿರೂರದಿಂದ ಹೆಬ್ಬಾಳವರೆಗಿನ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು. ಇವುಗಳಿಗೆ ಕೇಂದ್ರದಿಂದ ಕೂಡಲೇ ಅನುದಾನ ಮಂಜೂರು ಮಾಡಿಸಬೇಕು ಶಾಸಕ ಎನ್.ಹೆಚ್. ಕೋನರಡ್ಡಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ತಾಲೂಕ ಪಂಚಾಯತ ಸದಸ್ಯರಾದ ಬಸವರಾಜ ಸಾಲಿ, ಬಸವರಾಜ ಬೀರಣ್ಣವರ, ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಮೇಟಿ, ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತೆವ್ವ ಕಲಗೌಡ್ರ, ಸದಸ್ಯರಾದ ಬಸವರಾಜ ದೇಮಕ್ಕನವರ, ಜಗದೀಶ ಬಡಿಗೇರ, ಶ್ರೀಮತಿ ಗಂಗಮ್ಮ ಬಂಗಿ, ಶ್ರೀಮತಿ ನೀಲವ್ವ ಮ್ಯಾನಾಸುರ, ಗರಪ್ಪ ಗೌರಿ, ಸಣ್ಣಕಲ್ಲಪ್ಪ ಒಂಟಿ, ಮಂಜುನಾಥ ಬಡಿಗೇರ, ಬಸಪ್ಪ ಕುಸುಗಲ್ಲ, ಜೆಡಿಎಸ್ ಮುಖಂಡರಾದ ವೀರನಗೌಡ ಮರಿಗೌಡರ, ರಾಜುಗೌಡ ಮತ್ತಿಹಳ್ಳಿ, ನಾಗಣ್ಣ ಅರಳಿಕಟ್ಟಿ ಗ್ರಾಮದ ಮುಖಂಡರಾದ ಸೋಮನಗೌಡ ಕಲ್ಲಗೌಡ್ರ, ಶಂಕ್ರಪ್ಪ ಮುಳಳ್ಳಿ, ಸಿದ್ದು ಕಪಲಿ, ಪ್ರಕಾಶಗೌಡ ಪಾಟೀಲ, ಮಂಜು ಮಾದರ ರಾಮಣ್ಣ ಮತ್ತಿಹಳ್ಳಿ, ನೂರೇಶ ಮಾದರ, ಮಾಬೂಬಾಸ ಮುಲ್ಲಣ್ಣವರ, ಸುರೇಶ ಮಲ್ಲಿಗವಾಡ, ಜಗದೀಶ ಮಾದರ ಉಪಸ್ಥಿತರಿದ್ದರು.