BREAKING NEWS(click on the news)----------
  • ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವರೆಗೆ ಜೆಡಿಎಸ್‍ನಿಂದ ಹೋರಾಟ : ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ


    Date : 2017-10-08 SHARE

    ಧಾರವಾಡ : ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಮೇಲೆ ಬಲವಂತವಾಗಿ ಹೇರಲು ಹೊರಟಿರುವ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ರದ್ದುಗೊಳಿಸಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಆಗ್ರಹಿಸಿದರು. ಅವರು ಧಾರವಾಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಎನ್‍ಪಿಎಸ್ ನೌಕರರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸಾವಿರಾರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಇಂತಹ ಅವೈಜ್ಞಾನಿಕ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ನ್ಯಾಯಯುತ ಹೋರಾಟದ ಪರವಾಗಿ ಜೆಡಿಎಸ್ ಪಕ್ಷ ಸದಾ ಇರಲಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಎಸ್. ಹೊರಟ್ಟಿ ಅವರೊಂದಿಗೆ ಚರ್ಚಿಸಿ, ಇದರ ವಿರುದ್ಧ ಜೆಡಿಎಸ್ ಪಕ್ಷದ ವತಿಯಿಂದ ಹೋರಾಟ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಮುಂಬರುವ 2018ರ ವಿಧಾನ ಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದು ಪಡಿಸುವ ಕುರಿತು ನಾವು ಬಹಿರಂಗವಾಗಿ ಘೋಷಣೆ ಮಾಡುವುದಾಗಿ ಹೇಳಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ರಾಷ್ಟ್ರೀಯ ಪಕ್ಷಗಳಿಗೆ ತಾಕತ್ ಇದ್ದರೆ ಈ ಕುರಿತು ತಮ್ಮ ಪ್ರಣಾಳಿಕೆಯಲ್ಲೂ ಅದನ್ನು ಹಾಕುವ ಮೂಲಕ ನಮ್ಮ ನಕಲು ಮಾಡಲು ತಯಾರಿದೆಯೇ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷ ಈ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದು, ಯಾವತ್ತೂ ರಾಜ್ಯದ ಸರ್ಕಾರಿ ನೌಕರರ ಪರವಿದೆ. ಈ ಬಗ್ಗೆ ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ತಾಕಿಸಲಾಗುವುದು ಎಂದು ಹೇಳಿದರು. ಇದು ರಾಜ್ಯ ಸರ್ಕಾರಿ ನೌಕರರ ಹಕ್ಕಿನ ಪ್ರಶ್ನೆಯಾಗಿದ್ದು, ಹಕ್ಕಿಗಾಗಿ ನಿತ್ಯ ನಿರಂತರವಾಗಿ ಹೋರಾಟ ನಡೆಸಿ, ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಅಲ್ಲದೆ, ಸರ್ಕಾರ ತೋರಿಸುವ ಅಲ್ಪಸ್ಪಲ್ಪ ತುಟ್ಟಿಭತ್ಯೆ ಆಸೆಗೆ ಮರಳಾದ ಹಾಗೆ ಸರ್ಕಾರದ ಯಾವುದೇ ಆಮಿಷಕ್ಕೆ ಬಲಿಯಾಗಿ ಹೋರಾಟದ ದಿಕ್ಕು ತಪ್ಪಬಾರದು ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ವಿಧಾನ ಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಹೋರಾಟಕ್ಕೆ ಯಾವಾಗಲು ನಮ್ಮ ಸಂಪೂರ್ಣ ಬೆಂಬಲವಿದೆ. ಈ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಹೆಚ್.ಡಿ. ದೇವೆಗೌಡರ ಜೊತೆಗೆ ಪ್ರಸ್ತಾಮಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲಾಗುವುದು. ಅಲ್ಲದೆ ನಿಮ್ಮ ಬೆಂಗಳೂರು ಚಲೋಗೆ ಸಂಪೂರ್ಣ ಬೆಂಬಲ. ನಾನು ಸ್ವತಃ ಮುಂದಾಳತ್ವ ವಹಿಸಿ ನಿಮ್ಮ ಜೊತೆಗೆ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಶಾಂತಾರಾಂ. ಸಿದ್ದು ಸಂಗಣ್ಣವರ, ಮಲ್ಲಿಕಾರ್ಜುನ ಬರಗಿ, ಸಂತೋಷ ಲಿಂಬಿಕಾಯಿ, ರಾಜ್ಯ ಸಹ ಕಾರ್ಯದರ್ಶಿ ರಾಜು ಮಾಳವಾಡ, ಜಿಲ್ಲಾ ಗೌರವ ಅಧ್ಯಕ್ಷ ಪ್ರಮೋದ ಶಿವಳ್ಳಿಮಠ, ಅಧ್ಯಕ್ಷ ಯಲ್ಲಪ್ಪ ಕರೆಣ್ಣವರ, ಕಾರ್ಯದರ್ಶಿ ಪಿ.ಎಫ್. ಗುಡೇನಕಟ್ಟಿ, ಉಪಾಧ್ಯಕ್ಷರಾದ ಜಗದೀಶ ವಿರಕ್ತಮಠ, ಎಸ್.ಕೆ. ರಾಯಣ್ಣವರ, ಖಜಾಂಚಿ ವಾಯ್.ಕೆ. ಗೊರವರ, ರಾಜಶೇಖರ ಕಂಠೆಪ್ಪಗೌಡ, ಬಿ.ಪಿ. ದೇಸೂರ, ಎಂ.ಡಿ. ಅತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.