ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 224 ಕ್ಷೇತ್ರಗಳಲ್ಲೂ ಉಚಿತ ಸಾಮೂಹಿಕ ವಿವಾಹ : ಬಿ.ಶ್ರೀರಾಮುಲು
Date : 2017-10-10 SHARE
ಬಳ್ಳಾರಿ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಾರೆ. ಆಗ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸರ್ಕಾರದಿಂದಲೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ಸಂಸದರಾದ ಬಿ.ಶ್ರೀರಾಮುಲು ಹೇಳಿದರು. ಅವರು ಬಳ್ಳಾರಿಯಲ್ಲಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಸಂಸದ ಬಿ.ಶ್ರೀರಾಮುಲು ನೇತೃತ್ವದಲ್ಲಿ ಆಯೋಜಿಸಿದ್ದ 20ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ 60 ಜೋಡಿಗಳಿಗೆ ಹರಿಸಿ ಮಾತನಾಡಿ, ಇದುವರೆಗೆ ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ 40 ಸಾವಿರ ಜೋಡಿಗಳಿಗೆ ಮದುವೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಪೂಜ್ಯ ಕಲ್ಯಾಣ ಶ್ರೀಗಳು ನೂತನ ವಧುವರರಿಗೆ ಆಶೀರ್ವಚನ ನೀಡಿ, ಮಕ್ಕಳನ್ನು ಎಷ್ಟಾದರೂ ಹಡೀರಿ. ಮೊದಲು ಕುಟುಂಬ ನಿರ್ವಹಣೆಗೆ ಬೇಕಾಗುವಷ್ಟು ದುಡಿಯುವುದನ್ನು ರೂಢಿಸಿಕೊಳ್ಳಿ ಎಂದರು. ಶಾಸಕರಾದ ಪಿ.ರಾಜೀವ್ ಕುಡಚಿ ಮತ್ತು ಟಿಎಚ್ ಸುರೇಶ್ ಬಾಬು, ಮಾಜಿ ಸಂಸದೆ ಜೆ.ಶಾಂತಾ, ಮಾಜಿ ಶಾಸಕರಾದ ನೇಮಿರಾಜ ನಾಯಕ, ಮೃತ್ಯುಂಜಯ ಜಿನಗಾ, ಚಂದ್ರಾ ನಾಯಕ, ಎಂಎಸ್ ಸೋಮಲಿಂಗಪ್ಪ, ಎನ್ ವೈ ಗೌಡರ್, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಾಜಿ ಸಂಸದ ಸಣ್ಣ ಫಕ್ಕಿರಪ್ಪ, ಬಿಜೆಪಿ ರೈತ ಮೋರ್ಚ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ನೂರ್ ಮಹ್ಮದ್, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜುಲು, ಎಸ್.ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ.ಶಶಿಕಲಾ, ಬಿಜೆಪಿ ಮುಖಂಡರಾದ ಹೆಚ್.ಹನುಮಂತಪ್ಪ, ಕೆಎಸ್ ದಿವಾಕರ್, ಓಬಳೇಶ್, ಗುತ್ತಿಗನೂರು ವಿರೂಪಾಕ್ಷಗೌಡ, ರುದ್ರಗೌಡ, ಇಬ್ರಾಹಿಂ, ಗುಜರಿ ಅಜೀಜ್, ಗೋನಾಳ್ ರಾಜಶೇಖರಗೌಡ, ಜೆರಾಲ್ಡ್, ಶಾಮ್, ಶಿವಕುಮಾರ್, ಕೆಎಸ್ ಅಶೋಕ್, ಬಾದುಲ್ಲಾ, ವೀರಶೇಖರರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.