BREAKING NEWS(click on the news)----------
  • ಪ್ರಗತಿಪರ ರೈತನಿಂದ "ರೈತ ಇನ್ನಿಲ್ಲ' ಕಿರುಚಿತ್ರ ಬಿಡುಗಡೆ


    Date : 2017-10-11 SHARE

    ಉತ್ತರ ಕರ್ನಾಟಕ ಹುಡುಗರ ಮಿಡಿಯಾ ಮೈಂಡ್ ಕ್ರಿಯೆಷನ್ಸ್ ತಂಡವು ನಿರ್ಮಿಸಿದ "ರೈತ ಇನ್ನಿಲ್ಲ' ಕಿರುಚಿತ್ರವನ್ನು ಪ್ರಗತಿಪರ ರೈತ ಗದಗ ಜಿಲ್ಲೆಯ ರೋಣದ ಮಲ್ಲಯ್ಯ ಗುರುಬಸವಯ್ಯ ಗುರುಬಸಪ್ಪನಮಠ ಅವರು ವಿಭಿನ್ನವಾಗಿ ಮಂಗಳವಾರ ನಗರದಲ್ಲಿ ಬಿಡುಗಡೆ ಮಾಡಿದರು. ಧಾರವಾಡದ ಆರ್.ಕೆ.ಛಾಯಾ ಫೌಂಡೇಶನ್ ಹಾಗೂ ಜೆಎಸ್‍ಎಸ್ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಸಹಯೋಗದಲ್ಲಿ ಉತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಂಪ್ರದಾಯಕ ಉಡುಗೆ ತೊಟ್ಟ ಬಾಲಕಿಯರು ಹೊತ್ತುಕೊಂಡು ಬಂದು ಬಿದರಿನ ಬುಟ್ಟಿಯೊಳಗಿನ ಬುತ್ತಿ ಗಂಟನ್ನು ಬಿಚ್ಚಿ, ಅದರಲ್ಲಿದ್ದ ಕಿರುಚಿತ್ರದ ಪೋಸ್ಟರ್‍ಗಳನ್ನು ಹೊರಗೆ ತೆಗೆದು ಪ್ರದರ್ಶಿಸಿ ರೈತ ಮಲ್ಲಯ್ಯ ಅವರು ಕಿರುಚಿತ್ರ ಬಿಡುಗಡೆ ಮಾಡಿದರು. ರೈತರ ಆತ್ಮಹತ್ಯೆ ಆಧರಿಸಿ ನಿರ್ಮಿಸಲಾದ ಈ ಕಿರುಚಿತ್ರವು ರೈತರ ವ್ಯಥೆಯನ್ನು ತೆರೆದಿಟ್ಟಿದೆ. ಅದೇ ಕಾರಣಕ್ಕೆ ರೈತರಿಂದಲೇ ಈ ಕಿರುಚಿತ್ರವನ್ನು ಉದ್ಘಾಟಿಸಲಾಯಿತು. ಜತೆಗೆ ರೈತರ ಮಗ ಗೌಡಪ್ಪಗೌಡ ಹೊಸಮನಿ ಎಂಬ ಬಾಲಕನಿಂದಲೇ ರೈತ ಮಲ್ಲಯ್ಯ ಅವರನ್ನು ಸ್ವಾಗತಿಸಲಾಯಿತು. ಈ ವೇಳೆ ಅವರಿಗೆ ಸಂಪ್ರದಾಯಕವಾಗಿ ತೆಂಗಿನಕಾಯಿ, ಎಲೆ-ಅಡಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಮಲ್ಲಯ್ಯ, "ಕಿರುಚಿತ್ರದಲ್ಲಿ ರೈತರ ಆತ್ಮಹತ್ಯೆಯ ಕಾರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇದನ್ನು ನೋಡಿ ಕಣ್ಣಲ್ಲಿ ನೀರು ಬಂತು. ಸಾಲ, ಬೆಳೆನಾಶ, ಬೆಳೆಗೆ ತಕ್ಕ ಬೆಲೆ ಸಿಗದ ಸ್ಥಿತಿ ಇದೆ. ಇಡೀ ವಿಶ್ವಕ್ಕೆ ಅನ್ನ ಕೊಡುವ ರೈತ ಇಂದು ಕಡುಬಡವನಾಗಿದ್ದಾನೆ' ಎಂದು ಬೇಸರ ವ್ಯಕ್ತಪಡಿಸಿದರು. "ರೈತರ ಒಳ ಬೇಗುದಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ಇಂದು ನೈತಿಕತೆ ಬೆಳೆಸಿಕೊಳ್ಳಬೇಕು. ರೈತರು ಆತ್ಮಹತ್ಯೆಯಂಥ ದುಡುಕು ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇತ್ತೀಚೆಗೆ ವಿದ್ಯಾರ್ಥಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿಯಾಗಬಾರದು. ವಿದ್ಯಾರ್ಥಿಗಳು, ದೇಶಪ್ರೇಮ ಹಾಗೂ ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಹೊಂದಿ ಜೀವನ ನಡೆಸಬೇಕು' ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್‍ಎಸ್ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ್ ಪ್ರಸಾದ್, "ಉತ್ತರ ಕರ್ನಾಟಕದ ಹುಡುಗರ ಮಿಡಿಯಾ ಮೈಂಡ್ ಕ್ರಿಯಷನ್ಸ್ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಕಿರುಚಿತ್ರದಲ್ಲಿ ಅವಕಾಶ ನೀಡುತ್ತಿದ್ದಾರೆ. "ಪಶ್ಚಾತಾಪ' ಸೇರಿ ಎರಡು ಕಿರುಚಿತ್ರಗಳನ್ನು ಈಗಾಗಲೇ ನಿರ್ಮಿಸಿ ಉತ್ತರ ಕರ್ನಾಟಕದಲ್ಲಿ ಪ್ರದರ್ಶನ ಮಾಡಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು' ಎಂದರು. "ರೈತ ಇನ್ನಿಲ್ಲ ಕಿರುಚಿತ್ರವನ್ನು ರೈತ ಆತ್ಮಹತ್ಯೆ ಕಥೆಯಿಟ್ಟುಕೊಂಡು ಮಾಡಿದ್ದಾರೆ. ರೈತ ಅನ್ನದಾತ. ಅವರನ್ನು ಸಂತೋಷದಿಂದ ಇಡುವುದು ನಮ್ಮೆಲ್ಲರ ಜವಾಬ್ದಾರಿ. ರೈತರ ಜೀವ ಅಮೂಲ್ಯವಾದದ್ದು. ಅದನ್ನು ಬಿಡುವ ಹಾಗೆ ಆಗಬಾರದು. ಅವರು ಬದುಕಿ ಬಾಳಬೇಕು' ಎಂದರು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಅಭಿವೃದ್ಧಿ ಅಧಿಕಾರಿ ಸೂರಜ್ ಜೈನ್, ಮೈನಾ ದಿವಟೆ, ಶೀತಲ್, ರಾಜೇಶ್ವರಿ, ಕರಿಯಪ್ಪ ಸುಣಗಾರ, ಅನುಶ್ರೀ ಕುಲಕರ್ಣಿ, ರಾಜೇಶ ಕುಲಕರ್ಣಿ ಹಾಗೂ ಇತರರು ಇದ್ದರು. ಬಸವರಾಜ ಗೋಕಾವಿ ನಿರೂಪಿಸಿದರು. ರಾಮಚಂದ್ರ ಕುಲಕರ್ಣಿ ಸ್ವಾಗತಿಸಿದರು. ಶಿವಾನಂದ ಬಮ್ಮಿಗಟ್ಟಿ ವಂದಿಸಿದರು. ಬಿಡುಗಡೆ ಬಳಿಕ 20 ನಿಮಿಷಗಳ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಜೆಎಸ್‍ಎಸ್ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಕಿರುಚಿತ್ರವನ್ನು ವೀಕ್ಷಿಸಿದರು. ಈ ವೇಳೆ ಶಿಕ್ಷಕರ ವೃಂದ ಹಾಜರಿತ್ತು. --- ‘ರೈತ ಇನ್ನಿಲ್ಲ’ ಕಿರುಚಿತ್ರದ ಬಗ್ಗೆ ಮಿಡಿಯಾ ಮೈಂಡ್ ಕ್ರಿಯೆಷನ್ಸ್ ಅಡಿಯಲ್ಲಿ ನಿರ್ಮಿಸಿದ ಈ ಕಿರುಚಿತ್ರವನ್ನು ರೈತರೊಬ್ಬರ ಆತ್ಮಹತ್ಯೆ ಆಧರಿಸಿ ನಿರ್ಮಿಸಲಾಗಿದೆ. ಧಾರವಾಡ ಹಾಗೂ ಜಿಲ್ಲೆಯ ನವಲಗುಂದ, ಸೋಮಾಪುರದಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಸಂತೋಷ್ ಜಿ. ನಿರ್ದೆಶನದಲ್ಲಿ ನಿರ್ಮಾಣಗೊಂಡಿರುವ 20 ನಿಮಿಷಗಳ ಕಿರುಚಿತ್ರಕ್ಕೆ ಬಸವರಾಜ ಗೋಕಾವಿ ಛಾಯಾಗ್ರಹಣ ಮಾಡಿದ್ದಾರೆ. ವಿಜಯ ಹಂಜಿ ಸಂಗೀತ ನೀಡಿದ್ದಾರೆ. ಪಾತ್ರಗಳಲ್ಲಿ ಶಿವಾನಂದ ಬಮ್ಮಿಗಟ್ಟಿ, ಮಮತಾ ಹಿರೇಮಠ, ಚಿರಂತ್ ಕುಂಬಾರ, ಸ್ನೇಹಾ ವಿಜಾಪುರ, ಮಿಥುನ್ ಶಿಂಧೆ, ಎಚ್. ಭಾಸ್ಕರ್, ವರ್ಷಾ ಅಂಗಡಿ, ದುಂಡಯ್ಯ ಹಿರೇಮಠ, ರವಿ ಚಿತ್ತರಗಿ, ರಾಮಚಂದ್ರ ಕುಲಕರ್ಣಿ, ಬಸವರಾಜ ಗೋಕಾವಿ, ವಿಶಾಲ್‍ಕುಮಾರ್ ಹಾಲಟ್ಟಿ ಕಾಣಿಸಿಕೊಂಡಿದ್ದಾರೆ.