ವಿಶ್ವ ದೃಷ್ಟಿ ದಿನದ ಅಂಗವಾಗಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ನಡಿಗೆ
Date : 2017-10-12 SHARE
ಧಾರವಾಡ : ವಿಶ್ವದ 105 ದೇಶಗಳು, 250 ಸ್ಥಳದಲ್ಲಿ ಮೊಟ್ಟ ಮೊದಲ ಬಾರಿಗೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಲಕ್ಷಾಂತರ ಪ್ರತಿನಿಧಿಗಳು ಅಂಧರಿಗಾಗಿ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ನಡೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಅಂತಹ ವಿಶಿಷ್ಟ ಅಭಿಯಾನಕ್ಕೆ ವಿದ್ಯಾನಗರಿ ಧಾರವಾಡವೂ ಸಾಕ್ಷಿಯಾಯಿತು. ಆ ಮೂಲಕ ಅಂಧರ ನೋವು ನಲಿವು ಅರಿತುಕೊಳ್ಳುವ ಜೊತೆಗೆ ಅಂಧರ ಬಾಳಿಗೆ ಬೆಳಕು ಆಗುವ ದೃಷ್ಠಿಯಿಂದ ನೇತ್ರದಾನ ಮಾಡುವಂತೆ ಪ್ರೇರಣೆ ನೀಡಿದರು. ಈ ಅಂಧರಿಗಾಗಿ ನಡಿಗೆಯನ್ನು ಮನಗುಂಡಿಯ ಬಸವಾನಂದ ಸ್ವಾಮೀಜಿ ಚಾಲನೆ ನೀಡಿದರು. ಈ ಯಾತ್ರೆಯೂ ಧಾರವಾಡದ ಸೇಂಟ್ ಜೋಸೆಫ್ ಶಾಲೆಯಿಂದ ಅಂಜುಮನ್ ಕಾಲೇಜ್ ವರೆಗೆ ನಡೆಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮನಗುಂಡಿಯ ಶ್ರಿ ಬಸವಾನಂದ ಸ್ವಾಮೀಜಿಯವರು, ಅಂಧರಿಗಾಗಿ ಕಣ್ಣಿದ್ದವರು ಇಂತಹ ಒಂದು ವಿನೂತನ ಪ್ರಯತ್ನ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಅಭಿಯಾನವನ್ನು ಸಂಘಟಿಸುವ ಮೂಲಕ ಎಲ್ಲರಿಗೂ ನೇತ್ರದಾನ ಮಾಡುವಂತೆ ಪ್ರೇರೆಪಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಅಂಧರ ನೋವನ್ನು ಅರಿಯುವ ಜೊತೆಗೆ ಕೇವಲ ಒಂದು ದಿನಕ್ಕೆ ಇಂತಹ ಅಭಿಯಾನ ಸೀಮಿತಗೊಳಿಸದೆ ವರ್ಷಪೂರ್ತಿ ಅಂಧರ ಶ್ರೇಯೋಭೀವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಅಭಿಯಾನದಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ಇಂತಹ ಅಭಿಯಾನದಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿರುವುದರಿಂದ ನಮಗೆ ಅಂಧರ ಸಂಕಷ್ಟ, ಸವಾಲುಗಳು ಅರಿವಿಗೆ ಬಂದಿದೆ. ಹೀಗಾಗಿ ನಾವು ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಡಿಎಚ್ಓ ಡಾ. ರಾಜೇಂದ್ರ ದೊಡ್ಡಮನಿ, ಫಾದರ್ ಪ್ರಶಾಂತ್, ಫಾದರ್ ಎಡ್ವರ್ಡ, ಇಸಬೆಲ್ಲಾ ಝೇವಿಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.