ರೈತರ ಬೆಳೆ ವಿಮೆ ಪರಿಹಾರಗಳಿಗೆ ಮೊಬೈಲ್ ಆಪ್ ಕಡ್ಡಾಯಕ್ಕೆ ವಿರೋಧ : ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ
Date : 2017-10-13 SHARE
ಬೆಂಗಳೂರು : ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ಪದ್ಧತಿ ರದ್ದು ಪಡಿಸಿ, ಅದಕ್ಕೆ ತಾಂತ್ರಿಕ ಪರಿಣಿತಿ ಪಡೆಯದೆಯಿರುವ ಸಿಬ್ಬಂದಿಯಿಂದ ಮೊಬೈಲ್ ಆಪ್ ಬಳಸಿ ಬೆಳೆ ವಿಮೆ ಪರಿಹಾರ ನೀಡಲು ಮುಂದಾಗಿರುವುದರಿಂದ ರೈತರಿಗೆ ಸರಿಯಾಗಿ ಪರಿಹಾರ ದೊರೆಯದೆ ಅನ್ಯಾಯವಾಗಲಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವರದಿ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿತ್ತು. ಈಗ ಏಕಾಎಕಿ ಅದನ್ನು ಹಿಂದಕ್ಕೆ ಪಡೆದಿರುವುದು ಸರಿಯಾದ ಬೆಳವಣಿಗೆ ಅಲ್ಲ. ಅಲ್ಲದೆ, ರೈತರಿಗೆ ಈ ಕುರಿತು ಸರಿಯಾದ ತಿಳವಳಿಕೆ ನೀಡದೆ ಮೊಬೈಲ್ ಆಪ್ ಮೂಲಕ ಪರಿಹಾರ ನೀಡಲು ಮುಂದಾಗಿರುವುದರಿಂದ ರೈತರಿಗೆ ಅನ್ಯಾಯವಾಗಲಿದೆ. ಹೀಗಾಗಿ ಇಂತಹ ಹೊಸ ನಿಯಮಾವಳಿ ಜಾರಿಗೊಳಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು. ಈ ಯೋಜನೆ ಜಾರಿಯಿಂದ ರೈತರು ವಿಚಲಿತರಾಗುವ ಸಾಧ್ಯತೆಯಿದ್ದು, ನಮ್ಮ ರೈತರನ್ನು ಯೋಜನೆ ಜಾರಿಗೂ ಮುನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅದರ ಸಾಧಕ ಭಾದಕಗಳನ್ನು ಅರಿತುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆನಂತರ ಜಾರಿಗೆ ತರಬೇಕು. ಇಲ್ಲದಿದ್ದರೆ ರೈತರು ರೊಚ್ಚಿಗೆಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದರು. ಈ ಹಿಂದೆ ರೈತರಿಗೆ ಬೆಳೆವಿಮೆ ಪರಿಹಾರ ಪಡೆಯಲು ಆಧಾರ ಲಿಂಕ್ ಕಡ್ಡಾಯಗೊಳಿಸಿರುವುದರಿಂದ ಇನ್ನೂ ಸಾಕಷ್ಟು ರೈತರ ಆಧಾರ್ ಲಿಂಕ್ ಆಗದ ಹಿನ್ನಲೆಯಲ್ಲಿ ಶೇ. 20ರಷ್ಟು ರೈತರ ಬೆಳೆ ವಿಮೆ ಪರಿಹಾರ ಬಾಕಿ ಉಳಿದಿದೆ. ಈ ಸಮಸ್ಯೆ ಬಗೆಹರಿಯುವ ಮುನ್ನವೇ ಮತ್ತೇ ಇದೀಗ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ಎಷ್ಟು ಸರಿ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಶ್ನಿಸಿದ್ದಾರೆ. ಮೊದಲು ನೆನೆಗುದಿಗೆ ಬಿದ್ದಿರುವ ಆಧಾರ್ ಲಿಂಕ್ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಿ, ಎಲ್ಲ ರೈತರಿಗೆ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ದೊರೆಯುವಂತೆ ಮಾಡಬೇಕು. ಆನಂತರ ಬೇಕಿದ್ದರೆ ರೈತರ ಸಭೆ ಕರೆದು ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಒಂದು ಉತ್ತಮವಾದ ನಿರ್ಧಾರ ಬರಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿಯವರೆಗೆ ಈ ಮೊಬೈಲ್ ಆಪ್ ಕಡ್ಡಾಯ ತಡೆ ಹಿಡಿಯಬೇಕು. ಇಲ್ಲದಿದ್ದರೆ ರೈತರೊಂದಿಗೆ ಜೊತೆಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಎಚ್ಚರಿಸಿದ್ದಾರೆ. ಆಧಾರ್ ಲಿಂಕ್ನಿಂದಾಗಿ ರೈತರು ಯಾವುದಾದರೂ ಒಂದು ಗ್ರಾಮದಲ್ಲಿ ಮಾತ್ರ ಜಮೀನಿನ ಪರಿಹಾರ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೇರೆ ಗ್ರಾಮದಲ್ಲಿ ಇರುವ ಜಮೀನಿಗೂ ಪರಿಹಾರ ಸಿಗುತ್ತಿತ್ತು. ಇದೀಗ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಕೇವಲ ಒಂದು ಕಡೆ ಮಾತ್ರ ಪರಿಹಾರ ಸಿಗಲಿದೆ. ಹೀಗಾಗಿ ಇಂತಹ ಅವೈಜಾÐನಿಕ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ಈ ಆಧಾರ್ ಲಿಂಕ್ನಿಂದಾಗಿ ವೃದ್ಯಾಪ್ಯ ವೇತನ, ವಿಧವಾ ವೇತನ, ಪೈಲ್ವಾನಗಳಿಗೆ ಮಾಶಾಸನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆದುಕೊಳ್ಳುವುದು ಕೂಡ ಕಷ್ಟಕರವಾಗಿದೆ. ಈಗಾಗಲೇ ಜನಸಾಮಾನ್ಯರು ಹಾಗೂ ಬಡವರು ಹೃದಯ ಕಾಯಿಲೆ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ ಚಿಕಿತ್ಸೆಗೆ ಹಣಕಾಸಿನ ತೊಂದರೆಯಾದಾಗ ವಾಜಪೇಯಿ ಆರೋಗ್ಯ ಶ್ರೀ, ಮುಖ್ಯಮಂತ್ರಿ ಪರಿಹಾರ ನಿಧಿ, ಯಶಸ್ವಿನಿ ಎಲ್ಲದಕ್ಕೂ ಆಧಾರ್ ಲಿಂಕ್ ಮಾಡಿರುವುದರಿಂದ ಕೇವಲ ಒಂದರಲ್ಲಿ ಮಾತ್ರ ಪರಿಹಾರ ತೆಗೆದುಕೊಳ್ಳುವಂತಾಗಿದೆ. ಇದರಿಂದಾಗಿ ನಿಜವಾಗಿಯೂ ಬಡವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬಹುತೇಕ ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಡ ರೋಗಿಗಳಿಗೆ ಪರಿಹಾರ ಕೊಡಿಸುವುದು ಕೂಡ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಯೋಜನೆ ಜಾರಿಗೂ ಮುನ್ನ ಅದರ ಸಾಧಕ ಬಾಧಕ ಕುರಿತು ಸಮಗ್ರವಾಗಿ ಚರ್ಚಿಸುವುದು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಬೇಕು ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಮಳೆಹಾನಿ ಪರಿಹಾರ ಬಿಡುಗಡೆಗೆ ಒತ್ತಾಯ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೆಲ ಜಿಲ್ಲೆಯಲ್ಲಿ ಮನೆಗಳು ಸಹ ಬಿದ್ದಿವೆ. ಮತ್ತು ವಿಶೇಷವಾಗಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ರಸ್ತೆ, ಸೇತುವೆಗಳು ಕೂಡ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಹೀಗಾಗಿ ಆಯಾ ಜಿಲ್ಲಾಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ, ಕೂಡಲೇ ಎಲ್ಲ ಜಿಲ್ಲೆಗಳಿಗೂ ಸೂಕ್ತ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಪತ್ರ ಬರೆದಿದ್ದಾರೆ. ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಕೂಡ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ನಾನೇ ಸ್ವತಃ ಅನೇಕ ಗ್ರಾಮ ವಾಸ್ತವ್ಯದ ವೇಳೆ ಪರಿಶೀಲನೆ ನಡೆಸಿದ್ದು, ತುರ್ತಾಗಿ ಸಿಆರ್ಎಫ್ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ರಸ್ತೆ ಸಂಪರ್ಕ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.