ಹುಬ್ಬಳ್ಳಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಭೇಟಿ, ಪರಿಶೀಲನೆ
Date : 2017-10-14 SHARE
ಹುಬ್ಬಳ್ಳಿ : ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೀಡಾದ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲನೆ ನಡೆಸಿ, ಗ್ರಾಮಸ್ಥರ ಅಹವಾಲು ಆಲಿಸಿದರು. ಶಿರಗುಪ್ಪಿ, ಮಂಟೂರ ಗ್ರಾಮದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದರು. ಶಿರಗುಪ್ಪಿ ಗ್ರಾಮದಲ್ಲಿರುವ ಶಿರಗುಪ್ಪಿ-ಮಣಕವಾಡ ರಸ್ತೆ ಹಾಳಾಗಿರುವದನ್ನು ವೀಕ್ಷಿಸಿದರು. ಆನಂತರ ಮಂಟೂರು ಗ್ರಾಮದ ಕುಡಿಯುವ ನೀರಿನ ಕೆರೆ ಕೋಡಿ ಒಡೆದ ಪರಿಣಾಮ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿರುವುದನ್ನು ವೀಕ್ಷಣೆ ಮಾಡಿದರು. ಮಳೆಗಾಲ ಮುಗಿಯುತ್ತಿದ್ದಂತೆ 2 ಕೋಟಿ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಕಾಂಕ್ರೀಟ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಲ್ಲದೆ, ಮಂಟೂರ ಗ್ರಾಮದ ಕೆರೆ ನೀರು ಕೆಲ ಮನೆಗೆ ನುಗ್ಗಿದ್ದರಿಂದ ಕೆಲ ಮನೆಯವರು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಮಂಟೂರು ಗ್ರಾಮದಲ್ಲಿ ತಾತ್ಕಲಿಕ ಗಂಜಿಕೇಂದ್ರ ಆರಂಭಿಸುವಂತೆ ಗ್ರಾಪಂ ಅಭಿವೃದ್ಧಿ ಅಧೀಕಾರಿಗಳಿಗೆ ಸೂಚನೆ ನೀಡಿದರು, ಆನಂತರ ಶಿರಗುಪ್ಪಿ- ಇಂಗಳಹಳ್ಳಿ ರಸ್ತೆ ಹಾಳಾಗಿರುವುದು ಪರಿಶೀಲನೆ ನಡೆಸಿದರು. ಈ ವೇಳೆ ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿ ಹಳ್ಳ ಬಂದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿರುವುದನ್ನು ಮನಗಂಡ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಬರುವ ದಿನಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಆ ಹಳ್ಳಕ್ಕೆ ಸೇತುವೆ ನಿರ್ಮಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಕೆಐಡಿಸಿಎಲ್‍ನಿಂದ ಮುಂದಿನ ತಿಂಗಳೂ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಮಳೆಹಾನಿ ಕುರಿತಂತೆ ಕಂದಾಯ ಇಲಾಖೆ ಅಧಿಕಾರಿಗಳು ಮನೆ ಕುಸಿತ, ಬೆಳೆಹಾನಿ ಸಮೀಕ್ಷೆ ನಡೆಸಿದರೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆ ಹಾಗೂ ಸೇತುವೆಗಳು ಹಾನಿಗೀಡಾಗಿರುವುದನ್ನು ಶೀಘ್ರದಲ್ಲಿಯೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೆ, ಜಿಲ್ಲಾಧಿಕಾರಿಗಳು ಆದಷ್ಟು ಬೇಗನೇ ಸಿಆರ್‍ಎಫ್ ಅನುದಾನದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಆದೇಶ ನೀಡಿದರು. ಬಳಿಕ ಮಳೆಯನ್ನು ಲೆಕ್ಕಿಸದೆಯೇ ಮಳೆಯಲ್ಲಿಯೇ ಇಂಗಳಹಳ್ಳಿ ಹಾಗೂ ಬಂಡಿವಾಡ ಗ್ರಾಮದ ಮಳೆ ಹಾನಿ ಪ್ರದೇಶ ಭೇಟಿ ನೀಡಿ ಶಾಸಕ ಎನ್.ಹೆಚ್. ಕೋನರಡ್ಡಿ ವೀಕ್ಷಣೆ ಮಾಡಿದರು. ಬಂಡಿವಾಡ ಗ್ರಾಮದ ಕೆರೆಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರೈತರು ತಮ್ಮ ಜಮೀನು ನೀಡಿದರೆ, ಯೋಗ್ಯದರದಲ್ಲಿ ಭೂಮಿ ಖರೀದಿಸಿ ಅವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು. ಆನಂತರ ನವಲಗುಂದ ತಾಲೂಕಿನ ಶಿಶುವಿನಹಳ್ಳಿ, ತುಪ್ಪದ ಕುರಟ್ಟಿ, ಶಲವಡಿ, ಗ್ರಾಮದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಹೋಸಮನಿ, ಮಂಟೂರು ಗ್ರಾಪಂ ಅಧ್ಯಕ್ಷ ನಾಗಣ್ಣ ಅರಳಿಕಟ್ಟಿ ಹುಬ್ಬಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ಮಳಗಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೇಟಿ, ಹುಬ್ಬಳ್ಳಿ ತಾಪಂ ಸದಸ್ಯ ಬಸವರಾಜ ಬೀರಣ್ಣವರ, ಕಂದಾಯ ನಿರೀಕ್ಷಿಕ ಪಾಟೀಲ ಕುಲಕರ್ಣಿ, ಮುಖಂಡರಾದ ರಾಜೇಶ ಆಲೂರ, ಅಶೋಕ ಮೇಟಿ, ಮಲ್ಲಿಕಾರ್ಜುನ ಬೆಳವಟಗಿ, ಬಸವನಗೌಡ ಕಾಕತ್‍ನವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.