ಹಳ್ಯಾಳ, ಗುಮ್ಮಗೋಳ, ಆಹಟ್ಟಿ ಗ್ರಾಮಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಭೇಟಿ, ಪರಿಶೀಲನೆ
Date : 2017-10-16 SHARE
ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೀಡಾದ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಹಾಗೂ ನವಲಗುಂದ ತಾಲೂಕಿನ ಮೊರಬ, ಗುಮ್ಮಗೋಳ, ಬ್ಯಾಲ್ಯಾಳ ಹಾಗೂ ಆಹೆಟ್ಟಿ ಗ್ರಾಮಗಳಿಗೆ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ರವಿವಾರ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲನೆ ನಡೆಸಿದರು. ಹಳ್ಯಾಳ ಗ್ರಾಮದ ಕುಸುಗಲ್ಲ-ಹಳ್ಯಾಳ ರಸ್ತೆ ಹಾಗೂ ಹುಬ್ಬಳ್ಳಿ-ಹಳ್ಯಾಳ ರಸ್ತೆ ಹತ್ತಿರವಿರುವ ಜಮೀನಿನ ನೀರು ಗ್ರಾಮದಲ್ಲಿ ನುಗ್ಗಿದ್ದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಆ ಪೈಕಿ ಕೆಲವು ಮನೆಗಳು ಕುಸಿದು ಬಿದ್ದರೆ, ಇನ್ನೂ ಕೆಲವು ಮನೆಗಳಲ್ಲಿನ ಸರಕು ಸರಂಜಾಮುಗಳು ಹಾನಿಗೀಡಾಗಿ, ಅಕ್ಷರಶಃ ಬೀದಿಗೆ ಬಿದ್ದಿರುವುದು ಕಂಡು ಬಂತು. ಈ ಹಿನ್ನಲೆಯಲ್ಲಿ ಕಂದಾಯ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಸೂಚಿಸಿದರು. ಬಳಿಕ ಮೊರಬ ಗ್ರಾಮದ ರಸ್ತೆ ಸಂಪರ್ಕ ಸ್ಥಗಿತಗೊಂಡಿರುವುದನ್ನು ಪರಿಶೀಲಿಸಿದರು. ಅಲ್ಲಿಂದ ಗುಮ್ಮಗೋಳ ಗ್ರಾಮಕ್ಕೆ ತೆರಳಿ ಅಲ್ಲಿಯ ಹಾನಿಯನ್ನು ವೀಕ್ಷಿಸಿದರು. ಬ್ಯಾಲ್ಯಾಳ ಗ್ರಾಮದಲ್ಲಿ ಮನೆ ಹಾನಿಯನ್ನು ವೀಕ್ಷಿಸಿದ ಶಾಸಕರು, ಅವರಿಗೆ ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಹಾಗೂ ಬಸ್ ನಿಲ್ದಾಣದಿಂದ ಕಲ್ಮೇಶ್ವರ ಗುಡಿಯವರೆಗೆ ರಸ್ತೆ ಸಂಪೂರ್ಣ ಕೆಟ್ಟಿದ್ದು, ಇದಕ್ಕಾಗಿ 19 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಮಳೆಯಿಂದ ಕುಸಿದು ಬಿದ್ದ ಗರಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗರಡಿ ಮನೆ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ 5 ಲಕ್ಷ ರೂ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಆನಂತರ ನವಲಗುಂದ ತಾಲೂಕಿನ ಆಹಟ್ಟಿ ಗ್ರಾಮದ ಜನತಾ ಪ್ಲಾಟ್‍ನಲ್ಲಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದ್ದನ್ನು ವೀಕ್ಷಣೆ ಮಾಡಿದರು. ಶಿರೂರ ಆಹಟ್ಟಿ ರಸ್ತೆ ಕಡಿದು ಹೋಗಿರುವುದನ್ನು ಪರಿಶೀಲನೆ ನಡೆಸಿದರು. ಮಳೆಯಿಂದ ಪ್ರತಿ ವರ್ಷ ಹಾನಿಗೀಡಾಗುತ್ತಿರುವ ಶಿರೂರ ಆಹಟ್ಟಿ ರಸ್ತೆಯನ್ನು ಮಳೆಗಾಲದ ನಂತರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹಳ್ಯಾಳ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಂ.ವೈ. ರಾಯನಗೌಡರ, ಎಂ.ಸಿ. ಹನುಮಂತಗೌಡರ, ರಘುನಾಥಗೌಡ ಕೆಂಪಲಿಂಗನಗೌಡರ, ಹೆಚ್.ಯು. ನಧಾಪ, ಮುತ್ತು ಹಸರಡ್ಡಿ, ಜಿ.ಎಸ್. ಮಾದಾಪುರ, ಸೋಮಶೇಖರ, ನಿಂಗಪ್ಪ ಜವಳಗೇರಿ, ಸೋಮು ಕೆಂಪಲಿಂಗನೌಡರ, ಗುಮ್ಮಗೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಮೇಶ ಮರಿಕೆಂಚಕ್ಕನವರ, ಶ್ರೀಕಾಂತ ಕಾಳೆ, ವಾಸು ವಡ್ಡರ, ಚನ್ನಪ್ಪ ಕಂಪ್ಲಿಕೊಪ್ಪ, ಹನುಮಂತಗೌಡ ಪಾಟೀಲ, ಬ್ಯಾಲ್ಯಾಳ ಗ್ರಾಮದ ಶಿವಲಿಂಗಯ್ಯ ಚಿಕ್ಕಮಠ, ಮಲ್ಲಿಕಾರ್ಜುನ ಧಾರವಾಡ, ಕುಮಾರಡ್ಡಿ ಹೆಬ್ಬಾಳ, ಆಹಟ್ಟಿ ಗ್ರಾಮದ ಉಮೇಶ ಕಡೆಮನಿ, ರಾಜೇಸಾಬ ನಧಾಪ್, ಮಂಜು ಹುಲಮನಿ, ಮಲ್ಲು ನರಗುಂದ,ದಿಲೀಪ ನಧಾಪ್, ಮಂಜು ದೊಡ್ಮನಿ, ನಾಗು ಬಂಗಿ, ಅಡಿವೆಪ್ಪ ಮಡಿವಾಳರ, ಬಸನಗೌಡ ಕರಿಗುಡ್ಡ, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಮಂಜು ಬ್ಯಾಳಿ, ಸಿಎಂಜಿಎಸ್‍ವೈ ಸಹಾಯಕ ಇಂಜಿನಿಯರ್ ಬಿರಾದಾರ, ಅಭಿವೃದ್ಧಿ ಅಧಿಕಾರಿ ಜಗದೀಶ ಹಡಪದ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.