ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ತೀವ್ರ ಖಂಡನೆ : ಶಿವು ಹಿರೇಮಠ
Date : 2017-10-16 SHARE
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರು ಆಗಿರುವ ಜಗದೀಶ ಶೆಟ್ಟರ ಹಾಗೂ ಸಂಸದರಾದ ಪ್ರಹ್ಲಾದ ಜೋಶಿ ಅವರ ವಿರುದ್ಧ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ವಿನಯ ಕುಲಕರ್ಣಿ ಅವರು ನೀಡಿರುವ ಹೇಳಿಕೆಯನ್ನು ಮಾಜಿ ಮೇಯರ್ ಹಾಗೂ ಬಿಜೆಪಿ ಯುವ ಮುಖಂಡ ಶಿವು ಹಿರೇಮಠ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಒಬ್ಬ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ವಿನಯ ಕುಲಕರ್ಣಿ ಅವರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಅವರ ಹುದ್ದೆಗೆ ಶೋಭೆ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದ ಜನತೆಯೇ ಮೆಚ್ಚುವಂತೆ ಕೆಲಸ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಶಾಸಕರು ಆಗಿರುವ ಅಜಾತ ಶತ್ರು ಜಗದೀಶ ಶೆಟ್ಟರ ಅವರ ಬಗ್ಗೆ ಹೀಗೆ ಲಘುವಾಗಿ ಟೀಕಿಸುವುದು ಯಾರೊಬ್ಬರಿಗೂ ಶೋಭೆ ನೀಡುವುದಿಲ್ಲ. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಆದರೆ ಯಾವುದೇ ಪದ ಪ್ರಯೋಗ ಮಾಡುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಹೇಳಿಕೆ ನೀಡುವುದು ಒಳಿತು. ಏಕೆಂದರೆ ಸಚಿವ ವಿನಯ ಕುಲಕರ್ಣಿ ಅವರು ಸ್ವತಃ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅವರೇ ಹೀಗೆ ಒಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಲ್ಹಾದ ಜೋಶಿಯನ್ನು ಪಶುಗಳಿಗೆ ಹೊಲಿಸಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡರೆ ಒಳಿತು ಎಂದು ಕುಟುಕಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿವೃತ್ತ ನೌಕರರ 137 ಕೋಟಿ ಪಿಂಚಣಿ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಕಳೇದ ನಾಲ್ಕು ವರ್ಷಗಳಿಂದ ಬಿಜೆಪಿ ಸತತವಾಗಿ ಪ್ರಯತ್ನಿಸುತ್ತಿದೆ. ಈ ಹಿಂದೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ ಗುಂಡೂರಾವ್ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಅವರ ನೇತೃತ್ವದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ಬಳಿ ಒಂದು ಬಾರಿ ನಿಯೋಗ ಕರೆದುಕೊಂಡು ಹೋಗಲಾಗಿತ್ತು. ಆದರೂ ನಮ್ಮ ಮನವಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಅದಕ್ಕೆ ಸ್ಪಂದಿಸುವುದು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ನಮ್ಮ ನಾಯಕರ ಬಗ್ಗೆ ಹಗುರುವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಅವರು ಇಂತಹ ಹೇಳಿಕೆ ನೀಡುವುದು ಬಿಟ್ಟು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ 137 ಕೋಟಿ ಪಿಂಚಣಿ ಬಾಕಿ ಹಣ ತರಲು ಶ್ರಮಿಸಬೇಕು ಎಂದು ಮಾಜಿ ಮೇಯರ್ ಹಾಗೂ ಬಿಜೆಪಿಯ ಯುವ ಮುಖಂಡ ಶಿವು ಹಿರೇಮಠ ಒತ್ತಾಯಿಸಿದ್ದಾರೆ.