BREAKING NEWS(click on the news)----------
  • ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ಶಾಸಕ ಎನ್.ಹೆಚ್. ಕೋನರಡ್ಡಿ ಮನೆಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ


    Date : 2017-10-20 SHARE

    ಧಾರವಾಡ : ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಶುಕ್ರವಾರ ಬೆಳಗ್ಗೆ ತಮ್ಮ ಶಾಂತಿನಿಕೇತನ ನಗರದ ನಿವಾಸದಲ್ಲಿ ಲೋಕ ಕಲ್ಯಾಣಲಾರ್ಥ ಹಾಗೂ ವಿಶೇಷವಾಗಿ ಮಹದಾಯಿ, ಕಳಸಾ-ಬಂಡೂರಿ ಜಾರಿ, ರೈತರ ಬಾಳು ಬೆಳಗಲಿ ಎಂದು ಹಾರೈಸಿ ಮಹಾಲಕ್ಷ್ಮಿ ಸಮೇತ ಸತ್ಯನಾರಾಯಣ ಪೂಜೆ ಸಲ್ಲಿಸಿದ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜೆಯಲ್ಲಿ ಶಾಸಕ ಎನ್.ಹೆಚ್. ಕೋನರಡ್ಡಿ, ಅವರ ಧರ್ಮಪತ್ನಿ ಪ್ರೇಮಾ ಕೋನರಡ್ಡಿ ಸೇರಿದಂತೆ ಅವರ ಅಪಾರ ಬಂಧು-ಬಳಗ ಹಾಗೂ ನೂರಾರು ಜೆಡಿಎಸ್ ಅಭಿಮಾನಿಗಳು ಪಾಲ್ಗೊಂಡಿದ್ದರು. ಸೂರ್ಯನಾರಾಯಣ ಭಟ್ ಅವರು ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕಿನ ಲಕ್ಷಾಂತರ ಜನರ ಏಕೈಕ ಆಶಾಕಿರಣವಾಗಿರುವ ಮಹದಾಯಿ, ಕಳಸಾ-ಬಂಡೂರಿ ಜಾರಿಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಈವರೆಗೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ನವಲಗುಂದ ಹಾಗೂ ನರಗುಂದದಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಕೇವಲ ಗೋವಾ ರಾಜ್ಯದ ಹಿತ ಕಾಯದೆ, ಕರ್ನಾಟಕದ ನೆಲ, ಜಲ, ಭಾಷೆಯ ವಿಚಾರದಲ್ಲೂ ಅದೇ ಕಾಳಜಿಯನ್ನು ತೋರಬೇಕಿದೆ. ಅಲ್ಲದೆ, ರೈತರ ಸಂಪೂರ್ಣ ಸಾಲಮನ್ನಾ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ ಪರಿಹಾರ, ಅತಿವೃಷ್ಠಿಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಆದರೂ ಈವರೆಗೆ ಯಾರೊಬ್ಬರು ಸ್ಪಂದಿಸಿಲ್ಲ. ಹೀಗಾಗಿ ಇಂದು ದೀಪಾವಳಿ ನಿಮಿತ್ತ ಮಹಾಲಕ್ಷ್ಮೀ ಸಮೇತ ಸತ್ಯನಾರಾಯಣನ ಸನ್ನಿಧಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ, 2018ರಲ್ಲಿ ಕರ್ನಾಟಕಕ್ಕೆ ಕುಮಾರಣ್ಣ ಬಂದು ನಾಡಿನ ಸಮಸ್ತ ರೈತರ ಬಾಳು ಬೆಳಗುವಂತಾಗಲಿ. ಆ ಮೂಲಕ ಅವರ ಜೀವನದಲ್ಲಿ ಹೊಸ ಮನ್ವಂತರ ಮೂಡಲಿ ಎಂದು ಪ್ರಾರ್ಥೀಸಿದ್ದೇವೆ ಎಂದು ತಿಳಿಸಿದರು. ಬೆಳಕಿನ ಹಬ್ಬ ದೀಪಾವಳಿ ಎಲ್ಲ ಅನ್ನದಾತರ ಬಾಳಿನಲ್ಲಿ ಕವಿದಿರುವ ಕತ್ತಲೆಯನ್ನು ಓಡಿಸಿ, ಸದಾ ಕಾಲ ಬೆಳಕು ನೀಡಿ, ನಾಡಿನ ಎಲ್ಲಡೆ ಬೆಳಕು ಪ್ರಜ್ವಲಿಸುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಉದ್ಯಮಿ ಬಿ.ಟಿ. ರಡ್ಡಿ, ಜೆಡಿಎಸ್ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.