BREAKING NEWS(click on the news)----------
  • ಪಂಚಮಸಾಲಿ ಸಮಾಜದ ಹೆಸರಿನಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜಕೀಯ : ನಾಗನಗೌಡ ಪಾಟೀಲ ನೀರಲಗಿ ಆರೋಪ


    Date : 2017-10-26 SHARE

    ಧಾರವಾಡ : ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿ ಸಮಾಜದ ಹೆಸರಿನಲ್ಲಿ ರಾಜಕೀಯ ಮಾಡುತ್ತ ಸಮಸ್ತ ಪಂಚಮಸಾಲಿ ಸಮಾಜದ ಘನತೆಗೆ ಕುಂದು ಉಂಟು ಮಾಡುತ್ತಿದ್ದಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಕೇದಾರ ವಿಕಾಸ ಸಮಿತಿ ಸಂಚಾಲಕ ನಾಗನಗೌಡ ಪಾಟೀಲ ನೀರಲಗಿ ಆಪಾದಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೂಡಲ ಸಂಗಮದ ಸ್ವಾಮೀಜಿಯನ್ನು ಎಲ್ಲ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ಸ್ವಾಮಿಜಿಗಳನ್ನಾಗಿ ಸ್ವೀಕರಿಸಿರುವುದಿಲ್ಲ. ಬದಲಿಗೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಹಾಗೂ ಸಮಾಜವನ್ನು ಒಡೆದು ಆಡುವ ಉದ್ದೇಶದಿಂದ ಬಳಸಿಕೊಳ್ಳುತ್ತಿದ್ದಾರೆ. ಸಚಿವ ವಿನಯ ಕುಲಕರ್ಣಿ ಹಾಗೂ ಸ್ವಾಮೀಜಿಯವರು ಸಮಾಜ ಸಂಘಟನೆ ಬದಲಿಗೆ ದಾರಿ ತಪ್ಪಿಸುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ನೀವಾಗಲಿ, ವಿನಯ ಕುಲಕರ್ಣಿಯವರಾಗಲಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲ ಸಂಗಮದ ಪಂಚಮಸಾಲಿ ಪೀಠದಿಂದ ಸಮಾಜಕ್ಕೆ ಧಾರ್ಮಿಕ, ಶೈಕ್ಷಣಿಕ ಅಥವಾ ಬಡ ಮಕ್ಕಳಿಗೆ ಆರ್ಥಿಕವಾಗಿ ಯಾವುದೇ ಸಹಾಯ ಮಾಡದೇ ಕೇವಲ ರಾಜಕೀಯ ಮುಖಂಡರು ಹೇಳುವ ಕಾರ್ಯದಲ್ಲಿ ತೊಡಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2012 ಅಕ್ಟೊಬರ್-23ರ ಕಿತ್ತೂರ ಉತ್ಸವದ ವೇಳೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆಯಲ್ಲಿ ವಿನಯ ಕುಲಕರ್ಣಿ ಹಾಗೂ ನೀವು ಆರ್ಥಿಕ ಸಹಾಯ ಕೋರಿರುತ್ತಿರಿ. ನಾನು ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಹಣಕಾಸಿನ ಸಹಾಯ ಮಾಡುವುದಿಲ್ಲ. ಬೇಕಿದ್ದರೆ ವಸತಿ ನಿಲಯ ಕಟ್ಟಲು 20 ಗುಂಟೆ ಭೂಮಿ ನೀಡಲು ಸಿದ್ಧನಿದ್ದೆನೆ ಎಂದು ಹೇಳಿದ್ದೆ. ಅಂದು ಅದಕ್ಕೆ ಸಹಮತ ವ್ಯಕ್ತಪಡಿಸಿದ ನೀವು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಚಕಾರವೆತ್ತದಿರುವುದು ನೋಡಿದರೆ ತಮ್ಮ ಸಮಾಜ ಕಾಳಜಿ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ನೀವಾಗಲಿ ಅಥವಾ ವಿನಯ ಕುಲಕರ್ಣಿಯವರಾಗಲಿ ಪಂಚಮಸಾಲಿ ಸಮುದಾಯದವರನ್ನು ಕರೆದು ಸಮಾಜದ ಏಳಿಗೆಗಾಗಿ ಸಮಾಲೋಚನೆ ನಡೆಸದೆ ಕೇವಲ ರಾಜಕೀಯ ಹಿತಾಸಕ್ತಿಗೆ ಮಣೆದು ಅಧಿಕಾರದ ಆಸೆಗೋಸ್ಕರ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ತಾವು ಕಾವಿ ಧರಿಸಿದರೂ ರಾಜಕೀಯ ವ್ಯಕ್ತಿಗಳಂತೆ ವರ್ತಿಸುತ್ತಿರುವುದರಿಂದ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ದೂರಿದರು. ಸನಾತನ ವೀರಶೈವ ಪಂಚಮಸಾಲಿ ಸಮಾಜದ ಪೂರ್ವಜರ ಹಾಗೂ ಹತ್ತು ಸಾವಿರ ವರ್ಷಗಳ ಇತಿಹಾಸ ತಿಳಿಯದೆ, ಸ್ವಾರ್ಥ ರಾಜಕೀಯ ಸಾಧನೆಗಾಗಿ ಬಳಸಿಕೊಂಡಿರುತ್ತಿರಿ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪರವರು ನಿಮ್ಮ ಮೇಲೆ ಮಾಡಿದ ಆರೋಪವು ನಿಜವಿದ್ದು, ನೀವು ಹಣವನ್ನು ರಾಜಕೀಯ ಮೂಲದಿಂದ ತೆಗೆದುಕೊಳ್ಳದಿದ್ದಲ್ಲಿ ನಿಮಗೆ ಐಶಾರಾಮಿ ಜೀವನ ನಡೆಸಲು ಹೇಗೆ ಸಾಧ್ಯ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ನಾಗನಗೌಡ ಪಾಟೀಲ ನೀರಲಗಿ ಸವಾಲು ಹಾಕಿದ್ದಾರೆ. ಹೀಗಾಗಿ ಇನ್ನೂ ಮುಂದೆ ತಾವು ಪಂಚಮಸಾಲಿ ಸಮಾಜದ ಹೆಸರನ್ನು ಬಳಸಿಕೊಂಡು ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೇಳಿಕೆ ಕೊಟ್ಟರೆ, ನಿಮ್ಮ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜ ಮುಖಂಡ ಹಾಗೂ ಕೇದಾರ ವಿಕಾಸ ಸಮಿತಿ ಸಂಚಾಲಕ ನಾಗನಗೌಡ ಪಾಟೀಲ ನೀರಲಗಿ ಎಚ್ಚರಿಸಿದ್ದಾರೆ.