BREAKING NEWS(click on the news)----------
  • ಅ. 28 ರಂದು ನಾಗನೂರನಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಗ್ರಾಮ ವಾಸ್ತವ್ಯ


    Date : 2017-10-26 SHARE

    ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ, ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಎಲ್ಲ ರೈತರಿಗೆ ಫಸಲ್ ಬೀಮಾ ಯೋಜನೆಯ ಪರಿಹಾರ ವಿತರಣೆ, ಅನಾವೃಷ್ಠಿ ಹಾಗೂ ಅತಿವೃಷ್ಠಿ ಬೆಳೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಆರಂಭಿಸಲಾಗಿರುವ 11ನೇ ಗ್ರಾಮ ವಾಸ್ತವ್ಯ ಅಕ್ಟೋಬರ್ 28ರಂದು ಶನಿವಾರ ಸಂಜೆ ನವಲಗುಂದ ತಾಲೂಕಿನ ನಾಗನೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಎರಡು ವರ್ಷದಿಂದ ಉತ್ತರ ಕರ್ನಾಟಕ ಭಾಗದ ಜನರು ಮಹದಾಯಿ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ಈವರೆಗೆ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಮತ್ತೋಮ್ಮೆ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ಸಮಸ್ಯೆ ಇರ್ತಥ್ಯಕ್ಕೆ ಮುಂದಾಗಬೇಕು ಎಂದು ಹಲವು ಬಾರಿ ಒತ್ತಾಯಿಸಲಾಗಿದೆ. ಆದರೆ ಈವರೆಗೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಕೇಂದ್ರದ ಮೇಲಾಗಲಿ ಇಲ್ಲವೇ ಗೋವಾ ಸರ್ಕಾರದ ಮೇಲಾಗಲಿ ಒತ್ತಡ ಹೇರಿಲ್ಲ. ಹೀಗಾಗಿ ಜೆಡಿಎಸ್ ವತಿಯಿಂದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಹೋರಾಟ ಆರಂಭಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನಾಂದೋಲನ ವಿಸ್ತರಿಸಲಾಗುತ್ತಿದೆ ಎಂದರು. ಈಗಾಗಲೇ ನವಲಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿರೇಸೂರ, ಶಲವಡಿ, ಹನಸಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಉಮಚಗಿ, ಬೋಗಾನೂರ ಹಳ್ಳಿಕೇರಿ, ಬಳ್ಳೂರ ಹಾಗೂ ದಾಟನಾಳದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಕುಂದುಕೊರತೆ ಆಲಿಸುವ ಜೊತೆಗೆ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಲಾಗಿದೆ. ಅದೇ ರೀತಿ ಇದೀಗ 11ನೇ ಗ್ರಾಮ ವಾಸ್ತವ್ಯ ನಾಗನೂರ ಗ್ರಾಮದಲ್ಲಿ ಅಕ್ಟೋಬರ್ 28ರಂದು ಶನಿವಾರ ರಾತ್ರಿ ಬಿಡಾರ ಮಾಡುವ ಮೂಲಕ ನವಲಗುಂದ ತಾಲೂಕು ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಅವರು ತಿಳಿಸಿದ್ದಾರೆ.