ನಿರ್ಮಲಾ ಫೌಂಡೇಶನ್ನಿಂದ ಬೃಹತ್ ಕಣ್ಣಿನ ತಪಾಸಣಾ ಶಿಬಿರ ನ. 6ರಂದು
Date : 2017-11-04 SHARE
ಹುಬ್ಬಳ್ಳಿ : ದಿ. ನಿರ್ಮಲಾ ಮೂರುಸಾವಿರಪ್ಪ ಕೊರವಿ ಅವರ ನಾಲ್ಕನೇ ಪುಣ್ಮಸ್ಮರಣೆ ಅಂಗವಾಗಿ ನವೆಂಬರ್ 6ರಂದು ಬೆಳಗ್ಗೆ 9 ಗಂಟೆಗೆ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಆವರಣದಲ್ಲಿರುವ ವೆಂಕಟೇಶ ಮಾಗಡಿ ಸಭಾ ಭವನದಲ್ಲಿ ನಿರ್ಮಲಾ ಫೌಂಡೇಶನ್ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವತಿಯಿಂದ ಬೃಹತ್ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನಿರ್ಮಲಾ ಫೌಂಡೇಶನ್ ಅಧ್ಯಕ್ಷ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ತಿಳಿಸಿದ್ದಾರೆ. ಶಿಬಿರಕ್ಕೆ ವಿಧಾನ ಪರಿಷತ್ ಹಿರಿಯ ಸದಸ್ಯರು ಹಾಗೂ ಮಾಜಿ ಸಚಿವರಾದ ಬಸವರಾಜ ಎಸ್. ಹೊರಟ್ಟಿಯವರು ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಮಾಜಿ ಮೇಯರ್ ವೀರಣ್ಣ ಸವಡಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಪುಲ್ಲಚಂದ್ರ ರಾಯನಗೌಡ, ಬೀರಣ್ಣ ಖಂಡೇಕರ್, ಶ್ರೀಮತಿ ಮೇನಕಾ ಹುರಳಿ ಅವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ರಾಜಣ್ಣ ಕೊರವಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಲಾ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ರಾಜಣ್ಣ ಕೊರವಿ ತಿಳಿಸಿದ್ದಾರೆ. ನೇತ್ರ ಚಿಕಿತ್ಸಾ ಶಿಬಿರಕ್ಕೆ ಡಾ. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ವಿಶ್ವ ಮಾಧ್ವ ಪರಿಷತ್, ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾ ಸಂಸ್ಥೆ ಕೈಜೋಡಿಸಿದ್ದು, ನೋಂದಣಿಗಾಗಿ ಮೈಲಾರಿ ಬೆಟಗೇರಿ ಅವರ ಮೊ.ಸಂ.9980292592ಗೆ ಸಂರ್ಪಕಿಸಬಹುದು ಎಂದು ಹೇಳಿದರು. ನಿರ್ಮಲಾ ಫೌಂಡೇಶನ್ ನಡೆದು ಬಂದ ದಾರಿ : ನಿರ್ಮಲಾ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಅನೇಕ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳ ಮೂಲಕ ತನ್ನದೆ ಆದ ವಿಶಿಷ್ಟ ಛಾಪು ಮೂಡಿಸಿದೆ. ಸಾವಿರಾರು ಜನ ಕಟ್ಟಡ ಕಾರ್ಮಿಕರಿಗೆ ಫೌಂಡೇಶನ್ ವತಿಯಿಂದ ಉಚಿತ ಜೀವವಿಮೆ ಸೌಲಭ್ಯ ಕಲ್ವಿಸಿದೆ. ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ನೇತ್ರದಾನ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸಹಸ್ರಾರು ಜನರ ಮನೆ-ಮನ ತಲುಪಿದೆ. ಇದರೊಂದಿಗೆ ಸ್ವಚ್ಛ ಸುಂದರ ಪರಿಸರ ಉಳಿವಿಗಾಗಿ ಸಸಿ ನೆಡುವ ಆಂದೋಲನ, ಸಾವಿರಾರು ಬಡ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಣೆ ಮಾಡಿದ ಹೆಮ್ಮೆ ನಿರ್ಮಲಾ ಫೌಂಡೇಶನ್ ಸಂಸ್ಥೆಗಿದೆ. ಫೌಂಡೇಶನ್ ಅಧ್ಯಕ್ಷರಾದ ರಾಜಣ್ಣ ಕೊರವಿಯವರ ನೇತೃತ್ವದಲ್ಲಿ ಹೀಗೆ ನೂರಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಥೆಯೂ ಜನಾನುರಾಗಿ ಮುನ್ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಮಹಾನಗರದ ದೀನ, ದಲಿತ, ಬಡಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯ ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಹಾಕಿಕೊಂಡಿದೆ ಎಂದು ನಿರ್ಮಲಾ ಫೌಂಡೇಶನ್ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದ್ದಾರೆ.