ಬಿಜೆಪಿಯ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರ ಜೀವನ ಮಟ್ಟ ಕುಸಿತ : ದೀಪಕ ಚಿಂಚೋರೆ ಕಳವಳ
Date : 2017-11-04 SHARE
ಧಾರವಾಡ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನೋಟ್ ಬ್ಯಾನ್, ಜಿಎಸ್ಟಿ ಜಾರಿ ಹಾಗೂ ಅಡುಗೆ ಅನಿಲ ದರ ಹೆಚ್ಚಳ ಸೇರಿದಂತೆ ಅನೇಕ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರ ಜೀವನ ಮಟ್ಟ ಸಂಪೂರ್ಣ ಕುಸಿತಗೊಂಡಿದೆ ಎಂದು ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಅವರು ವಾರ್ಡ ನಂ 17ರ ಕಲ್ಯಾಣ ನಗರದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು. ಬಿಜೆಪಿ ಮುಖಂಡರು ಚುನಾವಣೆ ಸಮೀಪಿಸುತ್ತಿದ್ದಂತೆ ಪರಿವರ್ತನಾ ರ್ಯಾಲಿಯ ಹೆಸರಿನಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. ಇದಕ್ಕೆ ಪ್ರಜ್ಞಾವಂತ ಮತದಾರರು ಯಾವುದೇ ಕಾರಣಕ್ಕೂ ಸ್ಪಂದಿಸುವುದಿಲ್ಲ ಎಂಬುದನ್ನು ಅವರು ಮರೆತಿದ್ದಾರೆ ಎಂದು ಲೇವಡಿ ಮಾಡಿದರು. ಹೀಗಾಗಿ ಬಿಜೆಪಿ ಆಡಳಿತ ವೈಖರಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಅಧಿಕಾರ ನೀಡುವ ಮೂಲಕ ಬಡವರ, ಹಿಂದುಳಿದ ವರ್ಗಗಳ ಹಾಗೂ ದಲಿತರ, ಶೋಷಿತರ ಸಬಲೀಕರಣಕ್ಕೆ ಕೈ ಜೋಡಿಸಬೇಕು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹತ್ತು ಹಲವು ಭಾಗ್ಯಗಳನ್ನು ನೀಡುವ ಮೂಲಕ ಜನರ ಭಾಗ್ಯದ ಬಾಗಿಲು ಅನಾವರಣಗೊಳಿಸಿದ ಹಿರಿಮೆ ನಮ್ಮ ಕಾಂಗ್ರೆಸ್ ಸರ್ಕಾರ ಹೊಂದಿದೆ. ಹೀಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ವಿಶೇಷವಾಗಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರವನ್ನು ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಜನತೆ ಮುಂಬರುವ 2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆರ್ಶೀವದಿಸಬೇಕು. ಆ ಮೂಲಕ ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ, ಸಿ.ಬಿ. ಯಲಿಗಾರ, ಬ್ಲಾಕ್ ಅಧ್ಯಕ್ಷ ಬುರಾನ್ ಗವಳಿ, ಬೂತ್ ಕಮಿಟಿ ಅಧ್ಯಕ್ಷರಾದ ಸತೀಶ ಕೊಳಿನ್, ವಿಜಯ ಬ್ಯಾಡಗಿ, ಗ್ರೇಗರಿ ಝೇವಿಯರ್, ಸ್ಪೀವನ್ ಡಿಕೋಸ್ಟ್, ಲಾರನ್ಸ್ ಝಳಕಿ, ಸೇರಿದಂತೆ ಕಲ್ಯಾಣ ನಗರದ ಗುರು ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.