ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬೇಡಿಕೆಗಳಿಗೆ ಸ್ಪಂದಿಸುವಂತೆ ಹೋರಾಟ : ಶಾಸಕ ಎನ್.ಹೆಚ್. ಕೋನರಡ್ಡಿ
Date : 2017-11-05 SHARE
ನವಲಗುಂದ : ಉತ್ತರ ಕರ್ನಾಟಕದ ಭಾಗದ ಜಲ್ವಂತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿ ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವಂತೆ ಬೆಳಗಾವಿಯಲ್ಲಿ ನವೆಂಬರ್ 13ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಅವರು ನವಲಗುಂದ ತಾಲೂಕಿನ ಶಾನವಾಡ ಗ್ರಾಮದಲ್ಲಿ ಶನಿವಾರ ಸಂಜೆ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಹಾಗೂ ರೈತರ ಸಂಪೂರ್ಣ ಸಾಲಮನ್ನಾ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಪರಿಹಾರ ಹಣ ಬಿಡುಗಡೆ ಹಾಗೂ ಅತಿ ಹೆಚ್ಚು ಮಳೆಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಆರಂಭಿಸಲಾಗಿರುವ 12ನೇ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಆಗಿದ್ದರಿಂದ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನಲ್ಲಿ ನೂರಾರು ಮನೆಗಳು ಕುಸಿದಿವೆ. ಅನೇಕ ರಸ್ತೆಗಳು ಹಾಳಾಗಿ ಹೋಗಿವೆ. ಈ ಹಿನ್ನಲೆಯಲ್ಲಿ ಕೂಡಲೇ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದರೂ ಈವರೆಗೆ ಸ್ಪಂದಿಸಿಲ್ಲ. ಹೀಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಿಯೇ ಕಾಲಿಡಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 10-15 ದಿನಗಳಲ್ಲಿ ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಬಗೆಹರಿಸಲು ಗೋವಾ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರ ಮನವೊಲಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಯೇ ಈ ಭಾಗಕ್ಕೆ ಕಾಲಿಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಅವರು ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಿಯೇ ಕಾಲಿಡಬೇಕು ಎಂದು ಆಗ್ರಹಿಸಿದರು. ರೈತರ ಸಂಪೂರ್ಣ ಸಾಲಮನ್ನಾ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಪರಿಹಾರ ಹಣ ಬಿಡುಗಡೆ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದರಿಂದಾಗಿ ಲಕ್ಷಾಂತರ ರೈತರು ಪರದಾಡುವಂತಾಗಿದೆ. ಖಾಸಗಿ ವಿಮಾ ಕಂಪನಿಯ ಎದುರು ಎರಡು ಸರ್ಕಾರಗಳು ಶರಣಾಗಿವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾನವಾಡ ಗ್ರಾಮ ವಿಕಾಸ ಯೋಜನೆಗೆ ಭೂಮಿಪೂಜೆ : ಶಾನವಾಡ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ 1 ಕೋಟಿ ಅನುದಾನದ ಗ್ರಾಮ ವಿಕಾಸ ಯೋಜನೆಗೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಯೋಜನೆ ಅಡಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ದೇವಸ್ಥಾನ ಹಾಗೂ ಮಸೀದಿಗಳ ದುರಸ್ತಿ, ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ನವಲಗುಂದ ವಿಧಾನ ಸಭಾ ಕ್ಷೇತ್ರದ ಆರು ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದ್ದು, ಶಾನವಾಡ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೈಯಲಾಗುವುದು ಎಂದರು. ಶಾನವಾಡ ಅಭಿವೃದ್ಧಿಗೆ ಅನುದಾನದ ಮಹಾಪೂರ : ಶಾನವಾಡ ಗ್ರಾಮದ ಬಸ್ ನಿಲ್ದಾಣದಿಂದ ಬಸವಣ್ಣ ದೇವಸ್ಥಾನದ ಕಾಂಕ್ರೀಟ್ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1 ಕೋಟಿ ಅನುದಾನ, ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಶಾನವಾಡ-ನವಲಗುಂದ ರಸ್ತೆ ನಿರ್ಮಾಣಕ್ಕೆ 3.5 ಕೋಟಿ ರೂ. ಅನುದಾನ ಹಂಚಿಕೆ ಮಾಡಿ ರಸ್ತೆ ಪೂರ್ಣಗೊಳಿಸಲಾಗಿದೆ. ಅದೇ ರಸ್ತೆಯಲ್ಲಿಯೇ 14 ಕೋಟಿ ವೆಚ್ಚದಲ್ಲಿ ಬೆಣ್ಣೆಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಂದುವರೆದಿದ್ದು, ಶೀಘ್ರದಲ್ಲಿಯೇ ಸೇತುವೆ ಕಾಮಗಾರಿಗೆ ಚಾಲನೆ ನೀಡ ಲಾಗುವುದು. ಕುಡಿಯುವ ನೀರಿಗಾಗಿ ಗ್ರಾಮದಲ್ಲಿ 15 ಲಕ್ಷ ರೂ. ಅನುದಾನದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ಕೊಳವೆ ಬಾವಿ ಕಾರ್ಯ ಪ್ರಾರಂಭವಾಗಿದೆ. ಪೈಪ್ ಲೈನ್ ವ್ಯವಸ್ಥೆಗೆ 4 ಲಕ್ಷ ರೂ. ಅನುದಾನ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ 8 ಲಕ್ಷ, ಬಸವಣ್ಣನ ದೇವಸ್ಥಾನಕ್ಕೆ ಐದು ಲಕ್ಷ, ಟಿಎಸ್ಪಿ ಯೋಜನೆಯ 17 ಲಕ್ಷ ರೂ ಅನುದಾನದಲ್ಲಿ ಗ್ರಾಮದ ಸಿ ಸಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಶೀಘ್ರದಲ್ಲಿಯೇ ವಾಲ್ಮೀಕಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಭರವಸೆ ನೀಡಿದರು. ಜನರ ಮನೆ ಬಾಗಿಲಿಗೆ ಶಾಸಕರ ನಡಿಗೆ : ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಮನೆ ಬಾಗಿಲಿಗೆ ತಾಲೂಕು ಆಡಳಿತವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಆ ಮೂಲಕ ಸ್ಥಳದಲ್ಲಿಯೇ ಜನರ ಕುಂದು ಕೊರತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಜನರಿಗೆ ನೇರವಾಗಿ ತಲುಪುವ ಮೂಲಕ ಅವರ ಆಶೋತ್ತರಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಎಂದರು. ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಶಾನವಾಡ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ : ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ಶಾನವಾಡ ಬಸ್ ನಿಲ್ದಾಣದ ಬಳಿ ನೂರಾರು ಮಹಿಳೆಯರು ಆರತಿ ಮಾಡಿ ಗ್ರಾಮ ವಾಸ್ತವ್ಯಕ್ಕೆ ಸ್ವಾಗತ ಕೋರಿದರು. ಚಕ್ಕಡಿ ಮೆರವಣಿಗೆ ಮೂಲಕ ಗ್ರಾಮದ ಯುವಕರು, ಮಹಿಳೆಯರು, ಹಿರಿಯರು ರೈತರು ಹಾಗೂ ಗ್ರಾಮಸ್ಥರು ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ಬರ ಮಾಡಿಕೊಂಡರು. ಬಳಿಕ ಶಾನವಾಡ ಗ್ರಾಮಸ್ಥರ ವಿವಿಧ ಅಹವಾಲು ಆಲಿಸಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಗ್ರಾಮಸ್ಥರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಸಂವಾದ ನಡೆಸಿ, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಇನ್ನುಳಿದ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬಳಿಕ ಗ್ರಾಮದ ಪ್ರಗತಿ ಪರ ರೈತರಾದ ರಾಯನಗೌಡ ಬಸನಗೌಡ ಜಕ್ಕನಗೌಡರ ಅವರ ಮನೆಯಲ್ಲಿ ವಾಸ್ತವ್ಯ ಮಾಡಲಾಯಿತು. ಇದರ ಸಾನಿಧ್ಯವನ್ನು ವೇದಮೂರ್ತಿ ವಿರೂಪಾಕ್ಷಯ್ಯ ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಶಿವಕ್ಕ ಚುಳಕಿ, ಹಾಲಕುಸುಗಲ್ ಗ್ರಾಪಂ ಅಧ್ಯಕ್ಷೆ ರೇಣುಕಾ ದುರ್ಗಣ್ಣವರ, ಉಪಾಧ್ಯಕ್ಷ ಈರಣ್ಣ ಶಿಶ್ವಿನಹಳ್ಳಿ, ಸದಸ್ಯರಾದ ನೀಲವ್ವ ಬಸಯ್ಯ ಪೂಜಾರ, ಶಾಂತವ್ವ ಕೆಂಪಣ್ಣವರ, ನಿಂಗಪ್ಪ ಹುಲಗೆಣ್ಣವರ, ಜಯಮ್ಮ ಮಲ್ಲಪ್ಪ ಹಳ್ಳದ, ಜೆಡಿಎಸ್ ಮುಖಂಡರಾದ ಫಕೀರಗೌಡ ನಿಂಗನಗೌಡ ದೊಡ್ಡಮನಿ, ಗ್ರಾಮದ ಹಿರಿಯರಾದ ನಿಂಗಪ್ಪ ಮಲ್ಲಪ್ಪ ಹಳ್ಳದ, ಗುರುನಗೌಡ ಹನುಮಂತಗೌಡ ದೊಡ್ಡಮನಿ, ಯಲ್ಲಪ್ಪ ನಿಂಗಪ್ಪ ಹಳ್ಳದ, ಈಶ್ವರಪ್ಪ ಅಂಗಡಿ, ಬಸನಗೌಡ ಮೂಲಿಮನಿ, ಬಸಲಿಂಗಪ್ಪ ತೊರಗಲ್, ನಾಗಪ್ಪ ವೀರಪ್ಪನವರ, ಬಾಬು ಮುಲ್ಲಾನವರ, ಶಿವಯೋಗಿ ವೀರಪ್ಪನವರ, ವಿಕಾಸ ಸೊಪ್ಪಿನ, ರಮಾನಾಥ ಶೈಣೆ, ಎಂ.ಎಸ್. ರೋಣದ, ಸೋಮಶೇಖರ ಈರೇಶನವರ, ರಮೇಶ ನವಲಗುಂದ, ಪ್ರಕಾಶ ಕೊಣ್ಣೂರ, ಶಂಕ್ರು ಗಾಣಗೇರ, ಶರಣು ಹಿರೇಮಠ ಯಮನೂರ, ಈಶ್ವರ ವಿಶ್ವಕರ್ಮ, ಹನುಮಂತಗೌಡ ಪಾಟೀಲ ಬಳ್ಳೂರ, ಕುಮಾರ ಮಂಕಣಿ, ಮಲ್ಲಿಕಾರ್ಜುನ ಕಾಲವಾಡ, ಕುಮಾರ ಮಾದರ, ತಹಸೀಲ್ದಾರ್ ನವೀನ ಹುಲ್ಲೂರು, ತಾಪಂ ಎಒ ಜಿ.ಡಿ. ಜೋಶಿ, ಲೋಕೋಪಯೋಗಿ ಇಲಾಖೆ ಎಇಇ ಮಳಿಮಠ, ಜಿಪಂ ಎಇಇ ಕೃಷ್ಣಾಜಿ ಚಾಟೆ, ನಿರ್ಮಿತಿ ಕೇಂದ್ರದ ಎಇಇ ಮಲ್ಲಿಕಾರ್ಜುನಗೌಡ, ಪಿಡಿಒ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾನವಾಡ ಗ್ರಾಮದಲ್ಲಿ ಮನೆ ಕುಸಿತ ಪರಿಶೀಲನೆ : ರವಿವಾರ ಬೆಳಗ್ಗೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಶಾನವಾಡ ಗ್ರಾಮದ ವಿವಿಧಡೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಈ ವೇಳೆ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮನೆ ಕುಸಿತಗೊಂಡ 35 ಮನೆಗಳನ್ನು ವೀಕ್ಷಿಸಿ, ಬಸವ ವಸತಿ ಯೋಜನೆಯಡಿ ಸಂತ್ರಸ್ತ್ರರಿಗೆ ಮನೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.