BREAKING NEWS(click on the news)----------
  • ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಎಚ್. ಕೆ ಪಾಟೀಲ ಹಿಂದೇಟು : ಎಸ್ ಆರ್. ಹಿರೇಮಠ ಕೆಂಡಾಮಂಡಲ


    Date : 2017-11-06 SHARE

    ಧಾರವಾಡ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶೇಷವಾಗಿ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮತ್ತು ಅವರ ಮಂತ್ರಿ ಮಂಡಲ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಮಾಜ ಪರಿವರ್ತನೆ ಸಮುದಾಯದ ಸಂಚಾಲಕ ಎಸ್.ಆರ್. ಹಿರೇಮಠ ಅವರು ಗಂಭೀರ ಆರೋಪ ಮಾಡಿದರು ಅವರು ಧಾರವಾಡದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಜನತೆಯ ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದು, ಅತಿ ಮಹತ್ವದ ನಾಲ್ಕು ವರ್ಷಗಳನ್ನು ಹಾಳು ಮಾಡುವ ಮೂಲಕ ವಚನ ಭ್ರಷ್ಟತೆ ಹಾಗೂ ದ್ರೋಹ ಮಾಡಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿರುವ ಸಚಿವ ಎಚ್.ಕೆ. ಪಾಟೀಲ ಅವರು ಗಣಿ ಲೂಟಿಕೋರರ ವಿರುದ್ಧ ಕಾನೂನು ಸಮರ ಸಾರುವಲ್ಲಿ ಹಾಗೂ ಅವರಿಂದ ಆದ ನಷ್ಟವನ್ನು ವಸೂಲಿ ಮಾಡುವಲ್ಲಿ ಸಂಪೂರ್ಣವಾಗಿ ಯಡವಿದ್ದಾರೆ. ಆ ಮೂಲಕ ರಾಜ್ಯದ ಖಜಾನೆ ಖಾಲಿಯಾಗಿದ್ದರೂ ಸಹ ಅದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿಲ್ಲ. ಎಂದರು. ಈ ಹಿನ್ನಲೆಯಲ್ಲಿ ಕೂಡಲೇ ಅವರು ಶ್ವೇತ ಪತ್ರ ಹೊರಡಿಸಬೇಕು. ಆ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ರಾಜ್ಯದ ಜನತೆಯ ಮುಂದಿಡಬೇಕು ಅಲ್ಲದೆ ಸಂಪುಟ ಸಮಿತಿಯಲ್ಲಿರುವ ನಿಷ್ಕ್ರಿಯ ಸಚಿವರನ್ನು ಕಿತ್ತೋಗೆದು ಪ್ರಾಮಾಣಿಕ ಸಚಿವರನ್ನು ಆ ತಂಡದಲ್ಲಿ ಸೇರಿಸುವ ಮೂಲಕ ಇನ್ನುಳಿದ ಆರು ತಿಂಗಳಲ್ಲಾದರೂ ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ವಿರುದ್ಧ ಹೋರಾಟ ನಡೆಸಿದ ರೀತಿಯಲ್ಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಸ್.ಆರ್. ಹಿರೇಮಠ ಗುಡುಗಿದರು.