BREAKING NEWS(click on the news)----------
  • ಪ್ರತಿಯೊಬ್ಬರು ತಾಯಿಯ ಋಣ ಸಂದಾಯ ಮಾಡಲು ಶ್ರಮಿಸಬೇಕು : ಬಸವರಾಜ ಹೊರಟ್ಟಿ


    Date : 2017-11-06 SHARE

    ಹುಬ್ಬಳ್ಳಿ : ದಿ. ನಿರ್ಮಲಾ ಮೂರುಸಾವಿರಪ್ಪ ಕೊರವಿ ಅವರ ಸ್ಮರಣಾರ್ಥ ನಿರ್ಮಲಾ ಫೌಂಡೇಶನ್ ಬೃಹತ್ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳುವ ಮೂಲಕ ರಾಜಣ್ಣ ಕೊರವಿಯವರು ಅಭಿನಂದನೀಯ ಕಾರ್ಯ ಮಾಡುತ್ತಿದ್ದಾರೆ. ಅವರ ರೀತಿಯಲ್ಲಿಯೇ ಪ್ರತಿಯೊಬ್ಬರು ತಾಯಿಯ ಋಣ ಸಂದಾಯ ಮಾಡಲು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಎಸ್. ಹೊರಟ್ಟಿ ಹೇಳಿದರು. ಅವರು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಆವರಣದಲ್ಲಿರುವ ವೆಂಕಟೇಶ ಮಾಗಡಿ ಸಭಾ ಭವನದಲ್ಲಿ ಸೋಮವಾರ ಬೆಳಗ್ಗೆ ನಿರ್ಮಲಾ ಫೌಂಡೇಶನ್ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಚಾಲನೆ ನೀಡಿ ಮಾತನಾಡಿದರು. ನಿರ್ಮಲಾ ಫೌಂಡೇಶನ್ ಅಧ್ಯಕ್ಷ ರಾಜಣ್ಣ ಕೊರವಿ ಹಾಗೂ ಅವರ ಸಹೋದರರು ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾಯಿಯ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ನಿರ್ಮಲಾ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 15 ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. 800ಕ್ಕೂ ಹೆಚ್ಚಿನ ಜನರ ತಪಾಸಣೆ : ಬೃಹತ್ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯಲ್ಲಿ 550 ಮಹಿಳೆಯರು ಹಾಗೂ 250 ಕ್ಕೂ ಹೆಚ್ಚು ಪುರುಷರು ಭಾಗವಹಿಸಿ ಇದರ ಸದುಪಯೋಗ ಪಡೆದರು. ಡಾ. ತಮ್ಮಣ್ಣ ಗಂಡಮಾಲಿ ಹಾಗೂ ತಂಡ ಚಿಕಿತ್ಸೆ ನೀಡಿದರು. ನೇತ್ರ ಚಿಕಿತ್ಸಾ ಶಿಬಿರಕ್ಕೆ ಡಾ. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ವಿಶ್ವ ಮಾಧ್ವ ಪರಿಷತ್, ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾ ಸಂಸ್ಥೆ ಕೈಜೋಡಿಸಿದ್ದವು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿಯ ಅರವಿಂದ ಜತ್ತಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಬಿ. ಕಲಿವಾಳ, ಕಲ್ಲಪ್ಪ ಯಲಿವಾಳ, ನಿರ್ಮಲಾ ಫೌಂಡೇಶನ್‍ನ ಸದಸ್ಯರಾದ ಮೂರುಸಾವಿರಪ್ಪ ಕೊರವಿ, ವಿಶ್ವನಾಥ ಕೊರವಿ, ಶಶಿಧರ ಕೊರವಿ, ಶಂಕರಗೌಡ ಪಾಟೀಲ, ಸುರೇಶ ಪಾಟೀಲ, ಶ್ರೀಕಾಂತ ಬಡಕಣ್ಣವರ, ನವೀನ ಮುನಿಯಪ್ಪನವರ, ದೀಪಕ ಚಿಕ್ಕೋಡಿ, ಎಸ್. ನಿತಿನ್ ಕುಮಾರ, ಭೂಷಣ ಕಾಳೆ, ಖಲಂದರ್ ಅಲಿ, ಅಶೋಕ ಇಳಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಿರ್ಮಲಾ ಫೌಂಡೇಶನ್ ಅಧ್ಯಕ್ಷ ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕಾಸ ಸೊಪ್ಪಿನ ಸ್ವಾಗತಿಸಿದರು. ಪ್ರೊ. ವಿ. ಎಸ್. ಕೌಜಲಗಿ ವಂದಿಸಿದರು.