BREAKING NEWS(click on the news)----------
  • ಬಸವರಾಜ ಹೊರಟ್ಟಿಗೆ ಬೆದರಿಕೆ ಪತ್ರ ಖಂಡಿಸಿ ಜೆಡಿಎಸ್‍ನಿಂದ ಪ್ರತಿಭಟನೆ


    Date : 2017-11-08 SHARE

    ಹುಬ್ಬಳ್ಳಿ : ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಲಿಂಗಾಯತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ಬೆದರಿಕೆ ಪತ್ರ ಬಂದಿರುವುದನ್ನು ಖಂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಹುಬ್ಬಳ್ಳಿಯ ಜೆಡಿಎಸ್ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ನೂರಾರು ಜೆಡಿಎಸ್ ಕಾರ್ಯಕರ್ತರು, ಕೂಡಲೇ ಬಸವರಾಜ ಹೊರಟ್ಟಿಯವರಿಗೆ ಸೂಕ್ತ ಭದ್ರತೆ ನೀಡಬೇಕು. ಹಾಗೂ ಬೆದರಿಕೆ ಪತ್ರ ಕಳುಹಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣ ಕೊರವಿ ಅವರು, ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕ ಕಂಡಂತಹ ಧೀಮಂತ ನಾಯಕರು. ವಿಧಾನಪರಿಷತಗೆ ಸತತ 7ನೇ ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಅಂತಹ ಹಿರಿಯ ಮುತ್ಸದಿ ರಾಜಕಾರಣಿಗೆ ಬೆದರಿಕೆ ಪತ್ರ ಬಂದಿರುವುದು ನಮಗೆಲ್ಲ ನೋವು ತಂದಿದೆ. ಲಿಂಗಾಯತ ಸಮಾವೇಶವನ್ನು ಯಶಸ್ವಿಗೊಳಿಸಿದ ಬಸವರಾಜ ಹೊರಟ್ಟಿಯವರ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಈ ಪತ್ರದಿಂದ ಕಂಡು ಬಂದಿದೆ. ಹೀಗಾಗಿ ಈ ಪತ್ರದ ಹಿಂದಿರುವ ದುಷ್ಟಶಕ್ತಿಗಳಿಗೆ ಕೂಡಲೇ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಅಲ್ತಾಫ್ ಕಿತ್ತೂರ, ಇರ್ಷಾದ್, ಶ್ರೀಕಾಂತ, ಹನುಮಂತ ಬದಿ, ಶಂಕರ್, ಪಕ್ರೋದ್ದೀನ್ ಗೊರವನಕೊಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಧಾರವಾಡದಲ್ಲೂ ಪ್ರತಿಭಟನೆ : ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಜಮಾಯಿಸಿದ ಜೆಡಿಎಸ್ ಹತ್ತಾರು ಕಾರ್ಯಕರ್ತರು ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಪತ್ರ ಬಂದಿರುವುದನ್ನು ಖಂಡಿಸಿ, ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಮುಜಾಹಿದ್ ಕಾಂಟ್ರಾಕ್ಟರ್, ತಾಲೂಕು ಅಧ್ಯಕ್ಷ ಮಹಾದೇವ ಟಗರಿ, ಗ್ರಾಮೀಣ ಮುಖಂಡ ಭೀಮಪ್ಪ ಕಸಾಯಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.