ಕಾಂಗ್ರೆಸ್‍ನ ಕರಾಳ ದಿನಕ್ಕೆ ಮಾಜಿ ಮೇಯರ್ ಶಿವು ಹಿರೇಮಠ ತೀವ್ರ ಆಕ್ಷೇಪ
Date : 2017-11-08 SHARE
ಹುಬ್ಬಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಐತಿಹಾಸಿಕ ಮಹಾನಿರ್ಧಾರವನ್ನು ದೇಶ ಹಾಗೂ ರಾಜ್ಯದ ಜನತೆ ಮುಕ್ತ ಕಂಠದಿಂದ ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹದರಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಮುಖಂಡರು ನೋಟ್ ಬ್ಯಾನ್ ಖಂಡಿಸಿ ಕರಾಳ ದಿನ ಆಚರಿಸುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಜನಸಾಮಾನ್ಯರ ಮುಂದೆ ಅಪಹಾಸ್ಯಕ್ಕೀಡಾಗುವ ಬದಲಿಗೆ ಕೇಂದ್ರ ಸರ್ಕಾರದ ನಿಲುವುವನ್ನು ಸ್ವಾಗತಿಸುವ ಮೂಲಕ ಹೃದಯವಂತಿಕೆ ತೋರಿಸಬೇಕು ಎಂದು ಮಾಜಿ ಮೇಯರ್ ಶಿವು ಹಿರೇಮಠ ಸಲಹೆ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಮುಖಂಡರು ಯಾವ ಕಾರಣಕ್ಕಾಗಿ ಕರಾಳ ದಿನ ಆಚರಿಸುತ್ತಿದ್ದಾರೆ ಎಂಬುದನ್ನು ಜನತೆ ಮುಂದಿಡಬೇಕು. ಈ ಕರಾಳ ದಿನ ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮಾತ್ರ ಆಗಿದೆ. ಹೊರತು ದೇಶದ ಜನ ಸಾಮಾನ್ಯರಿಗಲ್ಲ ಎಂದು ಟೀಕಿಸಿದ್ದಾರೆ. ದೇಶದಲ್ಲಿನ ಕಾಳಧನಿಕರಿಗೆ ಹಾಗೂ ನಕಲಿ ನೋಟು ಚಲಾವಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ನೋಟ್ ಬ್ಯಾನ್‍ನಂತಹ ದಿಟ್ಟ ನಿರ್ಧಾರವನ್ನು ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯವನ್ನು ಇಡೀ ಜಗತ್ತೇ ಕೊಂಡಾಡಿದೆ. ಇದು ಕೇವಲ ಕಪ್ಪು ಹಣ ಹೊಂದಿದ್ದವರಿಗೆ ಮಾತ್ರ ಹೊಡೆತ ನೀಡಿದೆ ಎಂದು ವಿವರಿಸಿದ್ದಾರೆ. ನೋಟ್ ಬ್ಯಾನ್‍ನಿಂದ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ : ಕಳೆದ ಒಂದು ವರ್ಷದಲ್ಲಿ ದೇಶದಲ್ಲಡೆ ಡಿಜಿಟಲ್ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಯಾಗಿದ್ದು, ಅನೇಕ ಹಳ್ಳಿಗಳು ಕ್ಯಾಶ್‍ಲೆಸ್ ಗ್ರಾಮಗಳಾಗಿ ಪರಿವರ್ತನೆಗೊಂಡಿವೆ. ಆ ಮೂಲಕ ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಉಗ್ರರ ವಿರುದ್ಧ ಹೋರಾಟ ನಡೆಸಲು ಪ್ರೇರಣೆಯಾಗಿದೆ ಎಂದು ಮಾಜಿ ಮೇಯರ್ ಶಿವು ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ತೆರಿಗೆ ಹಣ ವಂಚಿಸಿ, ಕಪ್ಪು ಹಣ ಸಂಗ್ರಹಿಸುತ್ತಿದ್ದ ಕಾಳ ಧನಿಕರಿಗೆ ಇದರಿಂದ ತೀವ್ರ ಹಿನ್ನಡೆಯಾಗಿದ್ದು, 2 ಲಕ್ಷಕ್ಕೂ ಅಧಿಕ ಖಾತೆದಾರರಿಗೆ ತೆರಿಗೆ ವಿಭಾಗ ಈಗಾಗಲೇ ನೋಟಿಸ್ ನೀಡಿದೆ. ಇದಲ್ಲದೆ, ನಕಲಿ ನೋಟುಗಳ ಚಲಾವಣೆಗೆ ತೆರೆ ಬಿದ್ದಿರುವುದು ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ನೋಟ್ ಬ್ಯಾನ್‍ನಿಂದಾಗಿ ಗೃಹ ಸಾಲ ಸಹಿತ ಎಲ್ಲ ಸಾಲಗಳ ಬಡ್ಡಿದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಎರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಪ್ರಧಾನಮಂತ್ರಿಯವರ ದಿಟ್ಟ ನಿರ್ಧಾರಕ್ಕೆ ಕೈ ಜೋಡಿಸುವ ಮೂಲಕ ಹೋರಾಟವನ್ನು ಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳಿಸಿ ಬಲಿಷ್ಠ ದೇಶ ನಿರ್ಮಿಸೋಣ ಎಂದು ಮಾಜಿ ಮೇಯರ್ ಶಿವು ಹಿರೇಮಠ ಮನವಿ ಮಾಡಿದ್ದಾರೆ.