ಬಸವರಾಜ ದೇವರನ್ನು ತರಾಟೆಗೆ ತೆಗೆದುಕೊಂಡ ಅರವಿಂದ ದಳವಾಯಿ
Date : 2017-11-08 SHARE
ಧಾರವಾಡ : ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಪಂಚಮಿ ಉತ್ಸವದ ವೇಳೆ ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಹಾಗೂ ಕುರುಬ ಸಮಾಜದ ಮುಖಂಡ ಅರವಿಂದ ದಳವಾಯಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅವರಿಗೆ ಕನಕ ಗೌರವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅದನ್ನು ಪಡೆಯಲು ಅವರ ಸಹೋದರ ಅರವಿಂದ ದಳವಾಯಿ ಆಗಮಿಸಿದ್ದರು. ಆದರೆ ಬಸವರಾಜ ದೇವರು ಕಾರ್ಯಕ್ರಮದಲ್ಲಿ ತಮಗೆ ಗೌರವದಿಂದ ನಡೆಸಿಕೊಂಡಿಲ್ಲ ಎಂದು ಆರೋಪಿಸಿ ಶ್ರೀಗಳನ್ನು ವೇದಿಕೆಯಲ್ಲಿಯೇ ತರಾಟೆ ತೆಗೆದುಕೊಂಡರು. ಇದರಿಂಧಾಗಿ ಸಮಾರಂಭದಲ್ಲಿ ಕೆಲ ಕಾಲ ಗೊಂದಲದ ವಾತವರಣ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಹಾಗೂ ಸಮಾಜದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಸ್ವಾಮೀಜಿಯವರೊಂದಿಗೆ ಅರವಿಂದ ದಳವಾಯಿ ಅವರು ನಡೆದುಕೊಂಡ ರೀತಿ ಖಂಡಿಸಿ ಸಮಾಜದ ಯುವಕರು ಅರವಿಂದ ದಳವಾಯಿ ಅವರೊಂದಿಗೆ ವಾದಕ್ಕಿಳಿದಿದ್ದರು. ಕೂಡಲೇ ಮಧ್ಯಪ್ರವೇಶ ಮಾಡಿದ ಕುರುಬ ಸಮಾಜದ ಮುಖಂಡರು ಮಾಧ್ಯಮಗಳಿವೆ. ಅವರ ಎದುರು ಈ ರೀತಿ ಕಿತ್ತಾಡುವುದು ಸರಿಯಲ್ಲ ಎಂದು ತಿಳಿ ಹೇಳಿ ಎಲ್ಲರನ್ನು ಸಾಗ ಹಾಕಿದರು. ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಮನಸೂರಿನ ಬಸವರಾಜ ದೇವರು, ವಾದ-ವಿವಾದ ಏನಿಲ್ಲ. ಇದು ಗುರು ಶಿಷ್ಯರ ನಡುವಿನ ಕಿತ್ತಾಟವಷ್ಟೇ. ನಾನು ಕ್ಷಮಿಸಿದ್ದೇನೆ ಎಂದು ವಿವಾದಕ್ಕೆ ತೆರೆ ಎಳೆದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ ದಳವಾಯಿ ಅವರು ಬಸವರಾಜ ದೇವರು ಆರಂಭದಿಂದಲೂ ನನ್ನೊಂದಿಗೆ ಇಂತಹ ವರ್ತನೆ ತೋರಿಸುತ್ತಿದ್ದರು. ಈ ಬಗ್ಗೆ ನಾನು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ವೇದಿಕೆಯ ಮೇಲೆಯೇ ಪ್ರತಿಭಟನೆ ಮಾಡಿದ್ದೇನೆ. ಈ ಹಿಂದೆ ಸ್ವಾಮೀಜಿಯವರನ್ನು ಮಠದಿಂದ ಹೊರಗೆ ಹಾಕಿದಾಗ ನಾನೇ ಅದರ ಕೀಲಿ ಮುರಿದು ಅವರನ್ನು ಮಠದ ಒಳಗೆ ಕಳುಹಿಸಿದ್ದನ್ನು ಅವರು ಮರೆತಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.