ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ತ ನೀಡಲು ಒತ್ತಾಯ
Date : 2017-11-09 SHARE
ಧಾರವಾಡ : ಜಿಲ್ಲೆಯ ಕಲಘಟಗಿ ಹಾಗೂ ಧಾರವಾಡ ತಾಲೂಕಗಳಲ್ಲಿ ಸಾವಿರಾರು ಬಡ ದಲಿತ ಹಾಗೂ ಭೂಹೀನ ರೈತರು ಸರ್ಕಾರಿ ಪಡ ಭೂಮಿ ಮತ್ತು ಅರಣ್ಯ ಭೂಮಿಯನ್ನು ಹಲವು ದಿನಗಳಿಂದ ಸಾಗುವಳಿ ಮಾಡುತ್ತಿದ್ದರೂ ಭೂಮಿಯ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ಹಿಂದೆ ಹಲವು ಬಾರಿ ಹೋರಾಟ ನಡೆಸಿ, ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಕಿಮ್ಮತ್ತು ನೀಡುತ್ತಿಲ್ಲ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಸಚಿವರ ಆದೇಶಕ್ಕೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಬಗರ ಹುಕುಂ ಸಾಗುವಳಿದಾರರಿಗೆ ಇದುವರೆಗೂ ಯಾವುದೇ ರೀತಿಯ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ದೂರಿದರು. ಅಲ್ಲದೇ ಬಗರ ಹುಕುಂ ಸಾಗುವಳಿದಾರರು ನಮೂನೆ 50-53 ರಲ್ಲಿ ಅರ್ಜಿ ಸಲ್ಲಿಸಿದರೂ ಇತ್ಯರ್ಥ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿ.ಎಸ್. ಸೊಪ್ಪಿನ್ ದೂರಿದರು. ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ಮತ್ತು ರೈತ ಮುಖಂಡರ ಮೇಲೆ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಾಗುವಳಿ ಮಾಡುತ್ತಿರುವ ರೈತರನ್ನು ಬೆದರಿಸುವುದು ಕಿರುಕುಳ ಕೊಡುವುದು, ಭೂಮಿಯಿಂದ ಹೊರ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಕೀಲರಾದ ಕೆ.ಎಚ್. ಪಾಟೀಲ್ , ನೀಲಕಂಠ ಸಿಂಪಿಗೇರ, ಕುಮಾರ ನಾಯಕ, ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.