ಬೆಂಗಳೂರು prajakiran.com : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಗೆ ಸ್ಪರ್ಧಿಸಿದಂತೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಪೊಲೀಸ ಮೊರೆ ಹೋಗಿದ್ದಾರೆ.
ಜೂನ್ 7ರ ಮಧ್ಯರಾತ್ರಿ 1.30ರ ಸುಮಾರಿಗೆ ಬೆಂಗಳೂರಿನ ಸದಾಶಿವನಗರದ ಮನೆ ದೂರವಾಣಿ ಸಂಖ್ಯೆ 080-23615050ಗೆ ಕರೆ ಮಾಡಿದಲ್ಲದೆ, ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಕರೆಯನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆಯವರೆ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ ಅವರಿಗೆ ಪ್ರಿಯಾಂಕ ಖರ್ಗೆ ಲಿಖಿತ ದೂರು ನೀಡಿದ್ದಾರೆ.
ಅಲ್ಲದೆ, ಅದೇ ದಿನ ಮಧ್ಯರಾತ್ರಿ 12.36ರಿಂದ 12.56ರ ವರೆಗೆ ಒಂದು ಅಪರಿಚಿತ ಮೊಬೈಲ್ ನಿಂದ ಹತ್ತಕ್ಕೂ ಹೆಚ್ಚು ಬಾರಿ ಕರೆ ಬಂದಿದ್ದು, ನಾನು ಸ್ವೀಕರಿಸಿರುವುದಿಲ್ಲ.
ಆನಂತರ ಖಾಸಗಿ ಸಂಖ್ಯೆಯಿಂದ ಬಂದ ಕರೆ ಸ್ವೀಕರಿಸಿದಾಗ ನನ್ನ ತಂದೆಯ ಹಾಗೆಯೇ ನನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ.
ಆದ್ದರಿಂದ ಈ ಎರಡು ಬೆದರಿಕೆಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.