ಧಾರವಾಡ PRAJAKIRAN.COM : ಆಯುಷ್ಯವನ್ನು ಸುಮ್ಮನೆ ಕಳೆದುಕೊಳ್ಳುವುದಕ್ಕಿಂತ ಇರುವಷ್ಟು ದಿನಗಳನ್ನು ಉಪಯುಕ್ತಗೊಳಿಸುವ ನಿಟ್ಟಿನಲ್ಲಿ ತೊಡಗಿದರೆ ಸಾಧನೆಗಳತ್ತ ಹೆಜ್ಜೆ ಹಾಕಲು ಸಾಧ್ಯ ಎಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಹೇಳಿದರು.
ಅವರು ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಎನ್. ಜಿ. ಚಚಡಿ ಮಾತನಾಡಿ, ಉಸಿರಿರುವವರೆಗೂ ಕಲಿಕೆಯ ಹಸಿವು ನಿರಂತರವಾಗಿರಬೇಕು. ತ್ಯಾಗ ಮನೋಭಾವನೆ ಮತ್ತು ಆತ್ಮತೃಪ್ತಿಗಾಗಿ ಶಿಕ್ಷಕ ತನ್ನ ಜ್ಞಾನವನ್ನು ಮತ್ತೆ ಮತ್ತೆ ಒರೆಗೆ ಹಚ್ಚಿಕೊಳ್ಳುವುದರ ಮೂಲಕ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಸ್ಪರ್ಧಾ ಸ್ಫೂರ್ತಿ ಹಿರಿಯ ಸಂಪಾದಕ ಐ. ಜಿ. ಚೌಗಲಾ, ಶೈಕ್ಷಣಿಕ ಮಾರ್ಗದರ್ಶಕ ಡಾ. ಎಂ. ವಾಯ್. ಸಾವಂತ, ಪ್ರಾಚಾರ್ಯ ಡಾ. ಐ. ಎಸ್. ಮಳೇಕರ, ಪ್ರೊ. ಎಂ. ಎ. ಸಿದ್ದಾಂತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳನ್ನು ಮಂಡಿಸಿದರು.
ಶೈಕ್ಷಣಿಕ ಮಾರ್ಗದರ್ಶಕ ವ್ಹಿ. ಎಂ. ಕಾಲಾಳದ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಚ್. ಎಂ. ಉಡಕೇರಿ ವೇದಿಕೆಯಲ್ಲಿದ್ದರು.
ಪ್ರಾಚಾರ್ಯ ಡಾ. ಐ. ಎಸ್. ಮಳೇಕರ ಸ್ವಾಗತಿಸಿದರು. ಸಂಯೋಜಕ ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಸಂಯೋಜಕರಾದ ಅಶ್ವಿನಿ ಕೊಟ್ಲಿ, ಕುಸುಮಾ ಹಾಗೂ ಇತರರು ಉಪಸ್ಥಿತರಿದ್ದರು.