ನವದೆಹಲಿ PRAJAKIRAN.COM : ಅನಾರೋಗ್ಯದ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಒಟ್ಟು 50 ದಿನಗಳ ನವದೆಹಲಿಯ ತಿಹಾರ್ ಜೈಲು ವಾಸ ಅಂತ್ಯಗೊಂಡಂತಾಗಿದೆ.
ಶಿವಕುಮಾರ್ ಅವರು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಇದರಿಂದಾಗಿ ಡಿಕೆಶಿಗೆ 25 ಲಕ್ಷ ರೂಪಾಯಿ ಬಾಂಡ್ ಹಾಗೂ ಶ್ಯೂರಿಟಿ ನೀಡಿ ಜಾಮೀನು ನೀಡಲಾಗಿದೆ.
ಜೊತೆಗೆ ವಿದೇಶಕ್ಕೆ ತೆರಳಬೇಕಾದರೆ ಕೋರ್ಟ್ ಅನುಮತಿ ಪಡೆದು ತೆರಳಬೇಕು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಕೋರ್ಟ್ ಗೆ ಪಾಸ್ ಪೋರ್ಟ್ ಸರಂಡರ್ ಮಾಡುವಂತೆ ಸೂಚಿಸಿದೆ.
ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಕೋರ್ಟ್ ಆವರಣದಲ್ಲಿ ಡಿ.ಕೆ. ಸುರೇಶ ಕಣ್ಣೀರಿಟ್ಟಿದ್ದಾರೆ. ಜೊತೆಗೆ ವಕೀರಲರೊಂದಿಗೆ ತಬ್ಬಿಕೊಂಡು ತಮ್ಮ ಸಂತಸ ವ್ಯಕ್ತಪಡಿಸಿದರು.
ಇವತ್ತು ಬಿಡುಗಡೆ ಬಹುತೇಕ ಡೌಟ್ :
ದೆಹಲಿ ಹೈಕೋರ್ಟ್ ಮಂಜೂರು ಮಾಡಿದರೂ ಡಿ.ಕೆ. ಶಿವಕುಮಾರ್ ಇವತ್ತು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಬಹುತೇಕ ಡೌಟ್ ಎನ್ನಲಾಗಿದೆ. ಏಕೆಂದರೆ ಅವರು ತಮ್ಮ ಪಾಸ್ ಪೋರ್ಟ್ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು.
ಅಲ್ಲದೆ, 25 ಲಕ್ಷರೂಪಾಯಿ ಶೂರಿಟಿ ನೀಡಬೇಕು. ಅಲ್ಲದೆ, ಇಡಿ ಅಧೀಕಾರಿಗಳು ಕರೆದಾರ ವಿಚಾರಣೆಗೆ ಹಾಜರಾಗುವುದಾಗಿ ಬರೆದುಕೊಡಬೇಕು. ಅದನ್ನು ಪೂರೈಸಿದ ಬಳಿಕ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯನ್ನು ದೆಹಲಿಯ ರೋಸ್ ಏವೆನ್ಯೂ ಕೋರ್ಟ್ ಗೆ ಹಾಜರು ಪಡಿಸಬೇಕು.
ಅವರು ಅದನ್ನು ಪರಿಶೀಲಿಸಿ, ಅವರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. ಅದನ್ನು ತಿಹಾರ್ ಜೈಲ್ ಅಧಿಕಾರಿಗಳಿಗೆ ಕೊಡಬೇಕು. ಆನಂತರ ತಿಹಾರ್ ಜೈಲು ಅಧಿಕಾರಿಗಳು ಅದನ್ನು ಪರಿಶೀಲಿಸಿ ಶಿವಕುಮಾರ್ ಅವರನ್ನು ಹೊರಗಡೆ ಬಿಟ್ಟು ಕಳುಹಿಸಲಿದ್ದಾರೆ.