FOR BEST NEWS & ADVERTISEMENT CONTACT PRAJAKIRAN - 9341197609
  • ಮತ ಯಂತ್ರಗಳ ದುರ್ಬಳಕೆ ಖಂಡಿಸಿ ಮೋದಿ ಪ್ರತಿಕೃತಿ ಸುಟ್ಟ ಕಾಂಗ್ರೆಸ್ ಕಾರ್ಯಕರ್ತರು


    Date : 2018-05-16 SHARE

    ಧಾರವಾಡ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಮತಚಲಾವಣೆಯಲ್ಲಿ ಭಾರೀ ಗೋಲಮಾಲ್‌ ಆಗಿದೆ. ವಿವಿ ಪ್ಯಾಟ್‌ಗಳಲ್ಲಿ ಮತದಾನದ ಸಮರ್ಪಕ ಪ್ರದರ್ಶನವಾಗಿಲ್ಲ. ಅಲ್ಲದೇ ಮತ ಎಣಿಕೆಯಲ್ಲಿಯೂ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದಾಗಿ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆರೋಪಿಸಿದರು. ಗುಜರಾತ್ ಹಾಗೂ ರಾಜಸ್ಥಾನಗಳಿಂದ ತರಿಸಿರುವ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಬಿಜೆಪಿ ಮತದಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ವ್ಯವಸ್ಥಿತ ಕುತಂತ್ರ ನಡೆಸಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತನಗೆ ಇಷ್ಟವಾದ ರೀತಿಯಲ್ಲಿ ಫಲಿತಾಂಶ ಪಡೆಯುವ ಹುನ್ನಾರ ನಡೆಸಿದೆ ಎಂದು ದೂರಿದರು. ಆದ್ದರಿಂದ ಚುನಾವಣಾ ಆಯೋಗ ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಅನೀಲ ಪಾಟೀಲ, ಅಲ್ತಾಫ್ ಹಳ್ಳೂರ, ಜಿಪಂ ಸದಸ್ಯ ಚನಬಸಪ್ಪ ಮಟ್ಟಿ, ಮುಖಂಡರಾದ ಡಾ.ಮಹೇಶ ನಾಲವಾಡ, ಸುನೀತಾ ಹುರಕಡ್ಲಿ, ದೀಪಕ ಚಿಂಚೋರೆ, ಯಾಸೀನ್ ಹಾವೇರಿಪೇಟ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.