ಧಾರವಾಡ PRAJAKIRAN.COM : ಧಾರವಾಡದ ಕಲಘಟಗಿ ರಸ್ತೆಯಲ್ಲಿನ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರ ವರ್ಗಾವಣೆ ವಿಚಾರ ಎರಡು ದಿನಗಳೂ ಕಳೆದರೂ ಕಗ್ಗಂಟಾಗಿಯೇ ಉಳಿದಿದೆ.
ಅಧಿಕಾರ ಉಳಿಸಿಕೊಳ್ಳಲು ಆರ್.ಎ. ಪಾರಸೆಟ್ಟಿ ಕಸರತ್ತು ನಡೆಸಿದರೆ, ಅಧಿಕಾರ ವಹಿಸಿಕೊಳ್ಳಲು ಎನ್.ಬಿ. ಜಾಧವ್ ಪ್ರಯತ್ನ ಮುಂದುವರಿಸಿದ್ದಾರೆ.
ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಆರ್.ಎ. ಪಾರಶೆಟ್ಟಿ ಅವರನ್ನು ರಾಜ್ಯಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಎರಡು ದಿನ ಕಳೆದರೂ ಹುದ್ದೆ ಬಿಟ್ಟುಕೊಡಲು ತಯಾರಿಲ್ಲ.
ಆದರೆ ಜಾಧವ ಅವರು ಪಟ್ಟು ಬಿಡದೆ ಶನಿವಾರ ದಿನವಿಡಿ ತರಬೇತಿ ಶಾಲೆಯಲ್ಲೆ ಉಳಿದುಕೊಂಡು ಅಧಿಕಾರ ಹಸ್ತಾಂತರಕ್ಕಾಗಿ ಎದುರು ನೋಡಿದರು.
ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು ಅ.೧೭ರಂದು ವಿಜಯಪುರದ ಡಿಎಆರ್ ಡಿ ವೈಎಸ್ಪಿ ಆಗಿದ್ದ ಎನ್.ವಿ. ಜಾಧವ್ ಅವರಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಿ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿದ್ದಾರೆ.
ಆದರೆ ಪಾರಶೆಟ್ಟಿ ಅವರಿಗೆ ಸ್ಥಳ ತೋರಿಸದೆ ಎತ್ತಂಗಡಿ ಮಾಡಿದ್ದಾರೆ. ಹೀಗಾಗಿ ಅವರು ಮುಂದಿನ ಸ್ಥಳ ನೇಮಕಾತಿಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
ಆದರೆ, ಎನ್.ವಿ.ಜಾಧವ ಅವರಿಗೆ ಪಾರಶೆಟ್ಟಿ ಅವರು ಇದುವರೆಗೂ ಅಧಿಕಾರ ಹಸ್ತಾಂತರಿಸದೆ ಇರುವುದರಿಂದ ನಾ ಕೊಡೆ ನೀ ಬಿಡೆ ಎಂಬಂತಾಗಿದೆ.
ಈ ಕುರಿತಂತೆ ಇಬ್ಬರು ಅಧಿಕಾರಿಗಳ ನಡುವೆ ಎರಡು ದಿನಗಳಿಂದ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ನನಗೆ ಯಾವುದೇ ಸ್ಥಳ ನೀಡದೇ ವರ್ಗ ಮಾಡಲಾಗಿದೆ.
ಇದರಿಂದ ನನಗೆ ಬರುವ ದಿನದಲ್ಲಿ ಪಿಂಚಣಿ ಸೇರಿದಂತೆ ನಾನಾ ಸೌಲಭ್ಯಗಳನ್ನು ಪಡೆಯಲು ನನಗೆ ಸಮಸ್ಯೆ ಆಗಲಿದೆ. ಈ ಕುರಿತುಗೃಹಮಂತ್ರಿ, ಪೊಲೀಸ್ ಇಲಾಖೆಯ ಗಮನಕ್ಕೂ ತಂದಿದ್ದೆನೆ.
ಮಾತ್ರವಲ್ಲದೇ ವರ್ಗಾವಣೆ ವಿರೋಧಿಸಿ ಅ.೧೮ರಂದು ಕೆಎಟಿಗೆ ಅರ್ಜಿಯನ್ನೂ ಸಲ್ಲಿಸಿದ್ದೆನೆ.ಹೀಗಾಗಿ ಅಧಿಕಾರ ಹಸ್ತಾಂತರಿಸುತ್ತಿಲ್ಲ ಎಂದು ಪಾರಶೆಟ್ಟಿ ತಮ್ಮ ಅಳಲು ತೊಡಿಕೊಂಡರು.
ಆದರೆ, ಜಾಧವ್ ಅವರು ರಾಜ್ಯ ಸರಕಾರ ನನಗೆ ವರ್ಗ ಮಾಡಿದ್ದು, ನಾನು ಈಗಾಗಲೇ ಸ್ವಯಂ ಪ್ರೇರಿತವಾಗಿ ಅಧಿಕಾರ ಸ್ವೀಕರಿಸಿ ವರದಿ ಮಾಡಿಕೊಂಡಿದ್ದೇನೆ ಎಂದು ಜಾಧವ್ ಅವರು PRAJAKIRAN.COMಕ್ಕೆ ತಿಳಿಸಿದ್ದಾರೆ.
ಹೀಗಾಗಿ ಎರಡನೇ ದಿನವೂ ಪೊಲೀಸ್ ತರಬೇತಿ ಶಾಲೆಯಲ್ಲಿ ಅಧಿಕಾರ ಹಸ್ತಾಂತರ ಹೈಡ್ರಾಮಾ ಮುಂದುವರೆದಂತಾಗಿದೆ. ಇದು ಹಿರಿಯ ಪೊಲೀಸ್ ಅಧಿಕಾರಿ ವರ್ಗದವರಿಗೆ ತೀವ್ರ ಮುಜುಗರ ತಂದಂತಾಗಿದೆ.
ಇದಕ್ಕೆ ತೇಪೆ ಹಾಕಲು ಹಲವರು ಕಸರತ್ತು ನೆಡೆಸಿದರೂ ಯಾವುದೇ ಪ್ರಯೋಜನವಾಗದಿರುವುದು ತೀವ್ರ ತಲೆನೋವು ಆದಂತಾಗಿದೆ. ಇದನ್ನು ಯಾವ ರೀತಿ ಬಗೆಹರಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.